ಚೆನ್ನೈ: ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ಮಂಗಳವಾರ ರಾಜ್ಯಪಾಲ ಆರ್.ಎನ್. ರವಿ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಇದರೊಂದಿಗೆ ಸತತ ಮೂರನೇ ವರ್ಷವೂ ರಾಜ್ಯಪಾಲರು ಸರ್ಕಾರದ ಅಧಿಕೃತ ಭಾಷಣವನ್ನು ಓದಲು ನಿರಾಕರಿಸಿದಂತಾಗಿದೆ.
ವಿಧಾನಸಭೆಗೆ ಆಗಮಿಸಿದ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಸ್ಪೀಕರ್ ಎಂ. ಅಪ್ಪಾವು ಅವರು ಸ್ವಾಗತಿಸಿದರು. ಆದರೆ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಬದಲು, ‘ನನಗೆ ತೀವ್ರ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ, ಯಾವುದೇ ಭಾಷಣವಿಲ್ಲದೆ ಸಭೆಯಿಂದ ನಿರ್ಗಮಿಸಿದರು. ರಾಜ್ಯಪಾಲರ ಈ ನಡೆ ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಇದನ್ನೂ ಓದಿ: ರಾಸಲೀಲೆ ವಿಡಿಯೋ ಪ್ರಕರಣ: DGP ರಾಮಚಂದ್ರ ರಾವ್ ಅಮಾನತು
ರಾಜ್ಯಪಾಲರ ಹೊರನಡೆದಿರುವ ನಡೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಟುವಾಗಿ ಟೀಕಿಸಿದ್ದಾರೆ. ಇದು ಸಂವಿಧಾನಾತ್ಮಕ ಸಾಂಪ್ರದಾಯಗಳ ಉಲ್ಲಂಘನೆ ಎಂದು ಆರೋಪಿಸಿದ ಅವರು, “ರಾಜ್ಯಪಾಲರು ಉದ್ದೇಶಪೂರ್ವಕವಾಗಿಯೇ ಇಂತಹ ವರ್ತನೆ ತೋರುತ್ತಿದ್ದಾರೆ. ಅವರ ನಡೆ ಇಡೀ ವಿಧಾನಸಭೆಯನ್ನು ಅವಮಾನಿಸಿದಂತೆ” ಎಂದು ಹೇಳಿದರು.
ಮುಖ್ಯಮಂತ್ರಿ ಸ್ಟಾಲಿನ್ ಮುಂದುವರೆದು, “ರಾಜ್ಯಪಾಲರಿಗೆ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸಲು ಯಾವುದೇ ಅವಕಾಶ ಇರುವುದಿಲ್ಲ. ಇದು ಸಂವಿಧಾನ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ” ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಭಾಷಣವು ಜನರಿಂದ ಆಯ್ಕೆಯಾದ ಸರ್ಕಾರದ ನೀತಿ ಹಾಗೂ ಯೋಜನೆಗಳನ್ನು ಪ್ರತಿಬಿಂಬಿಸುವ ದಾಖಲೆ ಆಗಿದ್ದು, ಅದನ್ನು ಓದುವುದು ರಾಜ್ಯಪಾಲರ ಸಂವಿಧಾನಾತ್ಮಕ ಕರ್ತವ್ಯ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ: ಬಳ್ಳಾರಿ ಸೇರಿ ಹಲವು ಕಡೆ ED ದಾಳಿ
ಈ ಘಟನೆ ರಾಜ್ಯಪಾಲರು ಮತ್ತು ತಮಿಳುನಾಡು ಸರ್ಕಾರದ ನಡುವಿನ ದೀರ್ಘಕಾಲದ ಸಂಘರ್ಷವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಹಿಂದಿನ ವರ್ಷಗಳಲ್ಲಿಯೂ ಸರ್ಕಾರದ ಭಾಷಣ, ನೀತಿ ನಿರ್ಣಯಗಳು ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ರಾಜ್ಯಪಾಲರು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ವಿಧಾನಸಭೆಯಲ್ಲೇ ಭಾಷಣವನ್ನು ಓದದೇ ಹೊರನಡೆದಿರುವುದು ರಾಜಕೀಯ ಹಾಗೂ ಸಂವಿಧಾನಾತ್ಮಕ ಚರ್ಚೆಗೆ ಮತ್ತಷ್ಟು ಇಂಧನ ತುಂಬಿದೆ.
ಇದನ್ನೂ ಓದಿ: ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ…!
ರಾಜ್ಯಪಾಲರ ನಡೆಗೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ವಿಧಾನಸಭೆಯ ಗೌರವ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.





















