ಮುಂಬೈ: ಭಾರತೀಯ ಕಲಾ ಲೋಕದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ, ಪ್ರಸಿದ್ಧ ಚಿತ್ರಕಾರ ರಾಜಾ ರವಿ ವರ್ಮ ಅವರ ‘ಯಶೋಧಾ ಮತ್ತು ಕೃಷ್ಣ’ ತೈಲವರ್ಣ ಕಲಾಕೃತಿ ಭಾರೀ ಮೊತ್ತಕ್ಕೆ ಹರಾಜಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ. ಮುಂಬೈನಲ್ಲಿ ನಡೆದ ಸ್ಯಾಫ್ರನ್ ಆರ್ಟ್ ಹರಾಜು ಪ್ರಕ್ರಿಯೆಯಲ್ಲಿ ಈ ಅಪರೂಪದ ಚಿತ್ರವು ಬರೋಬ್ಬರಿ ₹167 ಕೋಟಿ ರೂ.ಗೆ ಮಾರಾಟಗೊಂಡಿದೆ.
ಈ ಕಲಾಕೃತಿಯನ್ನು ಸೈರಸ್ ಪೂನವಾಲಾ ಅವರು ಖರೀದಿಸಿದ್ದು, ಭಾರತೀಯ ಕಲಾಕೃತಿಗಳ ಹರಾಜು ಇತಿಹಾಸದಲ್ಲೇ ಇದು ಅತಿ ಹೆಚ್ಚು ಬೆಲೆಗೆ ಮಾರಾಟವಾದ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
‘ಯಶೋಧಾ ಮತ್ತು ಕೃಷ್ಣ’ ಚಿತ್ರವು ತಾಯಿತನ ಮತ್ತು ದೈವಿಕ ಸ್ನೇಹದ ಭಾವನೆಗಳನ್ನು ಅತ್ಯಂತ ಸೊಗಸಾಗಿ ಚಿತ್ರಿಸಿರುವುದರಿಂದ ಕಲಾರಸಿಕರ ಗಮನ ಸೆಳೆದಿತ್ತು. ವಿಶೇಷವಾಗಿ, ರಾಜಾ ರವಿ ವರ್ಮ ಅವರ ಕಲಾಕೃತಿಗಳು ಭಾರತೀಯ ಪೌರಾಣಿಕ ಕಥೆಗಳನ್ನು ಯಥಾರ್ಥ ಶೈಲಿಯಲ್ಲಿ ಜೀವಂತಗೊಳಿಸಿದಕ್ಕಾಗಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿವೆ.
ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹಲವು ಖರೀದಿದಾರರು ಸ್ಪರ್ಧಾತ್ಮಕವಾಗಿ ಬಿಡ್ ಹಾಕಿದ್ದು, ಅಂತಿಮವಾಗಿ ಈ ಕಲಾಕೃತಿ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದು ಭಾರತೀಯ ಕಲೆಯ ಅಂತರರಾಷ್ಟ್ರೀಯ ಮೌಲ್ಯ ಮತ್ತು ಬೇಡಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಕಲಾ ತಜ್ಞರ ಪ್ರಕಾರ, ಇಂತಹ ಅಪರೂಪದ ಚಿತ್ರಗಳು ಕಾಲಕ್ರಮೇಣ ಇನ್ನಷ್ಟು ಮೌಲ್ಯ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಭಾರತೀಯ ಕಲಾಕೃತಿಗಳ ಹೂಡಿಕೆ ಮೌಲ್ಯವೂ ಹೆಚ್ಚುತ್ತಿದೆ.




















