ದೇಶದಲ್ಲಿ ತೈಲ ಬಿಕ್ಕಟ್ಟು ಉಲ್ಭಣಿಸಿದ ಬಳಿಕ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇವುಗಳಲ್ಲಿ “ತೈಲ ಬಿಕ್ಕಟ್ಟಿನಿಂದ ಲಾಕ್‌ಡೌನ್ ಜಾರಿ ಆಗಬಹುದು” ಎಂಬ ಭ್ರಾಂತಿ ಸಮಾಜದಲ್ಲಿ ಚಿಂತೆ ಹುಟ್ಟಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಖುದ್ದು ಸ್ಪಷ್ಟನೆ ನೀಡಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದಾರೆ.
“ಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದ್ದು, ಇಂಧನ ಪೂರೈಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ. ಭಾರತದಲ್ಲಿ ಲಾಕ್‌ಡೌನ್ ಬಗ್ಗೆ ಇರುವ ವದಂತಿಗಳು ಶುದ್ಧ ಸುಳ್ಳು. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆಗಳೂ ಇಲ್ಲ. ಇಂತಹ ಸಮಯದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಇರೋದು ಸೂಕ್ತ. ಈ ರೀತಿಯ ವದಂತಿಗಳು ಸಮಾಜಕ್ಕೆ ಹಾನಿಕಾರಕವಾಗಲಿದೆ.”
ಇದಲ್ಲದೆ, ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಬಗೆಹರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರಗಳ ಮನವಿ ಮೇರೆಗೆ, ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಈಗಿರುವ ಗ್ಯಾಸ್ ಮಿತಿ ಶೇ.50 ರಿಂದ ಶೇ.70ಕ್ಕೆ ಹೆಚ್ಚಳವಾಗಲಿದೆ. ಇದರಿಂದ ಕೈಗಾರಿಕೆ, ಜವಳಿ ಸೇರಿದಂತೆ ಹಲವು ವಲಯಗಳಿಗೆ ಅನುಕೂಲವಾಗಲಿದೆ.
ಇನ್ನು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ 4ನೇ ವಾರಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಈ ಸಂವಾದದಲ್ಲಿ, ಯುದ್ಧದ ಬಿಕ್ಕಟ್ಟು ಎದುರಿಸಲು ಸಲಹೆಗಳು ನೀಡುವ ಸಾಧ್ಯತೆ ಇದೆ.























