Narendra Modi Birthday. ಸೆಪ್ಟೆಂಬರ್ 17ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ. ದೇಶ, ವಿದೇಶಗಳ ಹಲವು ನಾಯಕರು 75ನೇ ವಸಂಕತಕ್ಕೆ ಕಾಲಿಟ್ಟ ನರೇಂದ್ರ ಮೋದಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯ ಉತ್ತಮವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿಗೆ 75ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ದೂರವಾಣಿ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ‘ನನ್ನ ಸ್ನೇಹಿತ, ಅಧ್ಯಕ್ಷ ಟ್ರಂಪ್ ನನ್ನ 75ನೇ ಹುಟ್ಟುಹಬ್ಬದಂದು ನಿಮ್ಮ ಫೋನ್ ಕರೆ ಮತ್ತು ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು’ ಎಂದು ಹೇಳಿದ್ದಾರೆ.
‘ನಿಮ್ಮಂತೆಯೇ, ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಕ್ರಮಗಳನ್ನು ನಾವು ಬೆಂಬಲಿಸುತ್ತೇವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
3ನೇ ಬಾರಿಗೆ ಭಾರತದ ಪ್ರಧಾನಿ: ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿ. ‘ನಾನು ನರೇಂದ್ರ ದಾಮೋದರ್ ದಾಸ್ ಮೋದಿ’ ಎಂದು ಮೇ 26, 2014ರಂದು ನರೇಂದ್ರ ಮೋದಿ ಭಾರತದ 14ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2014, 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲವು ಸಾಧಿಸಿದೆ. ಮೂರು ಬಾರಿಯೂ ಪ್ರಧಾನಿಯಾಗಿ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಲು ಶ್ರಮಿಸುತ್ತಿದ್ದಾರೆ.
ಗುಜರಾತ್‌ನ ಸಾಮಾನ್ಯ ಪ್ರಚಾರಕರಿಂದ ಗುಜರಾತ್ ಮುಖ್ಯಮಂತ್ರಿಯಾಗುವ ತನಕ ಮತ್ತು ನಂತರ ದೇಶದ ಪ್ರಧಾನ ಮಂತ್ರಿಯಾಗುವವರೆಗೆ ಪ್ರಧಾನಿ ಮೋದಿ ಜೀವನ ಸಾಕಷ್ಟು ಜನರಿಗೆ ಸ್ಪೂರ್ತಿದಾಯಕವಾಗಿದೆ. ದೇಶ ವಿದೇಶದ ಹಲವು ಗಣ್ಯರು ನರೇಂದ್ರ ಮೋದಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.
ಗುಜರಾತ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಅಕ್ಟೋಬರ್ 2001 ರಿಂದ ಮೇ 2014ರ ತನಕ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಗುಜರಾತ್ ರಾಜ್ಯದ ಸಣ್ಣ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ 1950ರ ಸೆಪ್ಟೆಂಬರ್ 17ರಂದು ಜನಿಸಿದ ನರೇಂದ್ರ ಮೋದಿ ಇಂದು ವಿಶ್ವದ ಪ್ರಭಾವಿ ನಾಯಕ. ಬಾಲ್ಯದ ಕಷ್ಟದ ಜೀವನ ಕಠಿಣಪರಿಶ್ರಮದ ಪಾಠವನ್ನು ಮೋದಿ ಅವರಿಗೆ ಕಲಿಸಿತ್ತು. ಯುವಕರಾಗಿದ್ದಾಗಲೇ ದೇಶ ಹಾಗೂ ಜನತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡರು ಮೋದಿ. ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ತೊಡಗಿ, ದೇಶ ನಿರ್ಮಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡರು.
ಆನಂತರ ಭಾರತೀಯ ಜನತಾ ಪಕ್ಷವನ್ನು ಸೇರಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಸಕ್ರಿಯ ಪಾತ್ರವಹಿಸಿ ಕಾರ್ಯಪ್ರವೃತ್ತರಾದರು. ನರೇಂದ್ರ ಮೋದಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಮಾಜಿಕ ಜಾಲತಾಣ, ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ಸದಾ ಜನರ ಜೊತೆ ಮೋದಿ ಸಂಪರ್ಕದಲ್ಲಿರುತ್ತಾರೆ. ವಿಶ್ವದ ವಿವಿಧ ರಾಷ್ಟ್ರಗ ಅತ್ಯುನ್ನತ ನಾಗರೀಕ ಗೌರವನ್ನು ನರೇಂದ್ರ ಮೋದಿ ಪಡೆದುಕೊಂಡಿದ್ದಾರೆ.
ರಾಜಕಾರಣದ ಹೊರತಾಗಿ ನರೇಂದ್ರ ಮೋದಿ ಬರವಣಿಗೆ ಮೇಲೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ದಿನಚರಿ ಯೋಗಾಭ್ಯಾಸದೊಂದಿಗೆ ಪ್ರಾರಂಭವಾಗುತ್ತದೆ. ಫಿಟ್ ಇಂಡಿಯಾ ಎಂಬದು ನರೇಂದ್ರ ಮೋದಿ ಘೋಷಣೆಯಾಗಿದೆ.