ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟು ಪರಿಣಾಮವಾಗಿ ಭಾರತಕ್ಕೆ ಎಲ್‌ಪಿಜಿ (LPG) ಆಮದು ಕುಂಠಿತವಾಗಿರುವ ಹಿನ್ನಲೆಯಲ್ಲಿ, ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಬದಲಾವಣೆ ಮಾಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಸಾಗಣೆಗಳು ಕಡಿಮೆಯಾಗಿರುವುದರಿಂದ, ಭಾರತಕ್ಕೆ ಎಲ್‌ಪಿಜಿ ಸರಬರಾಜು ವ್ಯತ್ಯಯಗೊಂಡಿದೆ. ಭಾರತವು ತನ್ನ ಒಟ್ಟು ಅನಿಲ ಅಗತ್ಯದ ಸುಮಾರು 60% ರಷ್ಟು ವಿದೇಶಗಳ ಮೇಲೆಯೇ ಅವಲಂಬಿತವಾಗಿರುವುದರಿಂದ ಈ ಬಿಕ್ಕಟ್ಟು ನೇರ ಪರಿಣಾಮ ಬೀರುತ್ತಿದೆ.
14.2 ಕೆಜಿ ಸಿಲಿಂಡರ್‌ನಲ್ಲಿ 10 ಕೆಜಿ ಗ್ಯಾಸ್? : ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್‌ನಲ್ಲಿ ಕೇವಲ 10 ಕೆಜಿ ಎಲ್‌ಪಿಜಿ ತುಂಬಿ ವಿತರಿಸುವ ಪ್ರಸ್ತಾವನೆ ಕುರಿತು ಚರ್ಚೆ ನಡೆಸುತ್ತಿವೆ. ಇದರ ಉದ್ದೇಶ — ಲಭ್ಯವಿರುವ ಸೀಮಿತ ಗ್ಯಾಸ್ ಸಂಗ್ರಹವನ್ನು ಹೆಚ್ಚಿನ ಮನೆಗಳಿಗೆ ತಲುಪಿಸುವುದು.
ಈ ಪ್ರಸ್ತಾವನೆ ಜಾರಿಗೆ ಬಂದರೆ: ಸಿಲಿಂಡರ್ ಮೇಲೆ “10 ಕೆಜಿ ಮಾತ್ರ” ಎಂಬ ಸ್ಟಿಕರ್ ಅಂಟಿಸಲಾಗುತ್ತದೆ, ಬೆಲೆ ಕೂಡ ತೂಕಕ್ಕೆ ಅನುಗುಣವಾಗಿ ಕಡಿಮೆಯಾಗಲಿದೆ, ಒಂದು ಸಿಲಿಂಡರ್‌ನ ಬಳಕೆ ಅವಧಿ (ಸಾಮಾನ್ಯವಾಗಿ 35–40 ದಿನ) ಕಡಿಮೆಯಾಗುವ ಸಾಧ್ಯತೆ ಎನ್ನಲಾಗುತ್ತಿದೆ.
ಇನ್ನೂ ಅಧಿಕೃತ ಘೋಷಣೆ ಇಲ್ಲ : ಇನ್ನು ಈ ಕ್ರಮದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಇದು ಪ್ರಸ್ತುತ ಯೋಜನಾ ಹಂತದಲ್ಲಿದ್ದು, ತಾಂತ್ರಿಕ ಬದಲಾವಣೆಗಳು ಮತ್ತು ನಿಯಂತ್ರಣ ಸಂಸ್ಥೆಗಳ ಅನುಮತಿ ಅಗತ್ಯವಿದೆ.
ಸಾರ್ವಜನಿಕರಿಗೆ ಸೂಚನೆ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ನಂಬುವ ಮೊದಲು, ಸರ್ಕಾರ ಅಥವಾ ಅಧಿಕೃತ ತೈಲ ಕಂಪನಿಗಳ ಪ್ರಕಟಣೆಗಳನ್ನು ಮಾತ್ರ ಗಮನಿಸಬೇಕು .
ವದಂತಿಗಳಿಗೆ ಕಿವಿಗೊಡಬೇಡಿ : ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟುಕೊಂಡಿದೆ, ತೈಲ ಕಂಪನಿಗಳೊಂದಿಗೆ ಸರ್ಕಾರವು ತುರ್ತು ಸಭೆಗಳು ನಡೆಯುತ್ತಿವೆ, ಸಿಲಿಂಡರ್ ಪ್ರಮಾಣ ಕಡಿತದ ಬದಲು ಪರ್ಯಾಯ ಸರಬರಾಜು ಮಾರ್ಗಗಳ ಅನ್ವೇಷಣೆ ನಡೆಯುತ್ತಿದೆ. ಗ್ರಾಹಕರಲ್ಲಿ ಆತಂಕ ಹೆಚ್ಚುತ್ತಿರುವ ಹಿನ್ನೆಲೆ, “ರೂಮರ್‌ಗಳಿಗೆ ಒಳಗಾಗಬೇಡಿ” ಎಂದು ತಜ್ಞರು ಮನವಿ ಮಾಡಿದ್ದು, ಅಧಿಕೃತ ನಿರ್ಧಾರ ಹೊರಬರುವವರೆಗೆ ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ. ವದಂತಿಗಳನ್ನು ನಂಬಬೇಡಿ. ಹಾಗೂ ನಿಜಾಂಶಗಳನ್ನು ಪರಿಶೀಲಿಸಿ. ಅನಗತ್ಯ ಗೊಂದಲಗಳಿಗೆ ಅವಕಾಶ ನೀಡಬೇಡಿ






















