ನವದೆಹಲಿ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಖ್ಯಾತ ಬುಕ್ಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಿದ ಕರ್ನಾಟಕ ಸರ್ಕಾರದ ನಿರ್ಧಾರ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ನಾಳೆ (ಸೆಪ್ಟೆಂಬರ್ 19) ತುರ್ತು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಸೆಪ್ಟೆಂಬರ್ 22 ರಂದು ದಸರಾ ಮಹೋತ್ಸವ ಪ್ರಾರಂಭವಾಗಲಿರುವುದರಿಂದ, ʼಸೆಪ್ಟೆಂಬರ್ 22ರಂದು ಹಿಂದೂಯೇತರ ವ್ಯಕ್ತಿಯೊಬ್ಬರಿಗೆ ಕರ್ನಾಟಕದ ಮೈಸೂರು ದೇಗುಲದಲ್ಲಿ ಚಾಮುಂಡೇಶ್ವರಿ ಉತ್ಸವಕ್ಕೂ ಮುನ್ನ ನಡೆಸುವ ಅಗ್ರ ಪೂಜೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.ಇದು ಹಿಂದೂ ಧಾರ್ಮಿಕ ಸಂಪ್ರದಾಯಗಳಿಗೆ ವಿರುದ್ಧವಾಗಿದೆʼ ಎಂದು ಅರ್ಜಿದಾರರ ಪರ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದರು.
ಈ ಮನವಿಯನ್ನು ಮಾನ್ಯ ಮಾಡಿದ ಸಿಜೆಐ ಪೀಠ, ಅರ್ಜಿಯನ್ನು ನಾಳೆ ವಿಚಾರಣೆಗೆ ಒಪ್ಪಿಕೊಂಡಿದೆ. ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬಿಜೆಪಿ ನಾಯಕ ಪ್ರತಾಪ ಸಿಂಹ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಮತ್ತು ವ್ಯಕ್ತಿಗಳು ಬಾನು ಮುಸ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.
ಆದರೆ, ಸೆಪ್ಟೆಂಬರ್ 15 ರಂದು ಕರ್ನಾಟಕ ಹೈಕೋರ್ಟ್ ಈ ಪಿಐಎಲ್‌ಗಳನ್ನು ತಿರಸ್ಕರಿಸಿತ್ತು. ಇದೀಗ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರ ಆಯ್ಕೆ ಒಂದು ಸಾಂಸ್ಕೃತಿಕ ಕಾರ್ಯಕ್ರಮದ ವಿಚಾರವನ್ನು ಧಾರ್ಮಿಕ ಮತ್ತು ರಾಜಕೀಯ ಅಖಾಡಕ್ಕೆ ಎಳೆದಿದೆ. ಸುಪ್ರೀಂ ಕೋರ್ಟ್‌ನ ನಾಳಿನ ತೀರ್ಪು ಈ ವಿವಾದಕ್ಕೆ ತೆರೆ ಎಳೆಯುವುದೇ ಅಥವಾ ಮತ್ತಷ್ಟು ತೀವ್ರಗೊಳಿಸುವುದೇ ಕಾದು ನೋಡಬೇಕಿದೆ.