ಹೊಸದಿಲ್ಲಿ: ಕ್ವಿಕ್ ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಾರ್ಮಿಕರಿಗೆ ದೊಡ್ಡ ರಿಲೀಫ್ ದೊರಕಿದೆ. ಕೆಲಸಗಾರರ ಸುರಕ್ಷತೆಯ ಹಿನ್ನೆಲೆ ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ಮಧ್ಯಸ್ಥಿಕೆ ಹಾಗೂ ಮಾತುಕತೆಗಳ ಫಲವಾಗಿ, ಪ್ರಮುಖ ಡೆಲಿವರಿ ಅಗ್ರಿಗೇಟರ್‌ಗಳು ಕಡ್ಡಾಯ 10 ನಿಮಿಷ ಡೆಲಿವರಿ ಗಡುವನ್ನು ತೆಗೆದುಹಾಕಲು ಒಪ್ಪಿಕೊಂಡಿವೆ.
ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿ ಹಾಗೂ ಜೊಮ್ಯಾಟೊ ಸೇರಿದಂತೆ ಪ್ರಮುಖ ಕಂಪನಿಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಮನ್ಸೂಖ್ ಮಾಂಡವಿಯಾ ಅವರು, ಸಭೆಯಲ್ಲಿ ಡೆಲಿವರಿ ಕಾರ್ಮಿಕರ ಸುರಕ್ಷತೆಯ ಹಿತಾಸಕ್ತಿಯಲ್ಲಿ ಕಟ್ಟುನಿಟ್ಟಾದ ಡೆಲಿವರಿ ಸಮಯ ಮಿತಿಗಳನ್ನು ತೊಲಗಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಯಲ್ ಸೊಸೈಟಿ ಚಿನ್ನದ ಪದಕ ಪಡೆದ ಶ್ರೀನಿವಾಸ ಕುಲಕರ್ಣಿ
ಸಮಯ ಮಿತಿಗಳು ಡೆಲಿವರಿ ಅಗ್ರಿಗೇಟರ್‌ಗಳ ಮೇಲೆ ಅನಗತ್ಯ ಒತ್ತಡ ಹೇರುತ್ತವೆ, ಇದರಿಂದಾಗಿ ಅಪಘಾತಗಳ ಅಪಾಯ ಹೆಚ್ಚಾಗುತ್ತದೆ ಎಂದು ಮಾಂಡವಿಯಾ ಹೇಳಿದ್ದಾರೆ. ವೇಗದ ವಿತರಣೆ ವಿಷಯದಲ್ಲಿ ಕಾರ್ಮಿಕರ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಹೀಗಾಗಿ ಕಂಪನಿಗಳು ತಮ್ಮ ಬ್ರ್ಯಾಂಡ್ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ಹಾಗೂ ಇತರ ಪ್ರಚಾರ ವಿಧಾನಗಳಿಂದ ಡೆಲಿವರಿ ಸಮಯದ ಭರವಸೆಯನ್ನು ತೆಗೆದುಹಾಕಲು ಒಪ್ಪಿಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.






















