ಲಾರ್ಡ್ಸ್: ಭಾರತದ ವಾಷಿಂಗ್ಟನ್ ಸುಂದರ ಮಾರಕದಾಳಿಗೆ ಆಂಗ್ಲರು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಪಂದ್ಯದ ನಾಲ್ಕನೇ ದಿನವಾದ ಇಂದು ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 192 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ಮೂಲಕ ಭಾರತದ ಗೆಲುವಿಗೆ 193ರನ್‌ಗಳ ಗುರಿ ನೀಡಿದೆ.
ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದ್ದ ಭಾರತ ಇಂದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಜೋ ರೂಟ್ ಕೇವಲ 40 ರನ್‌ಗಳನ್ನಷ್ಟೇ ಗಳಿಸಿದ್ದರೂ ಕೂಡ ಇಂಗ್ಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸಮನ್ ಎಂದೆನಿಸಿಕೊಂಡರು.
ಆರಂಭದಿಂದಲೂ ಆಂಗ್ಲರ ಪಡೆ ರನ್ ಗಳಿಸಲು ಪರದಾಡುವಂತಾಯಿತು. ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ 5ನೇ ವಿಕೆಟ್‌ಗೆ ನಡೆಸಿದ 67 ರನ್‌ಗಳ ಜತೆಯಾಟವೇ ಇಂಗ್ಲೆಂಡ್ ಪರ ಬಂದ ಉತ್ತಮ ಜತೆಯಾಟವಾಯಿತು.
ಇನ್ನಿಂಗ್ಸ್ ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಡಕೆಟ್ ಮತ್ತು ಆಲಿ ಪೋಪ್ ಅವರನ್ನು ಔಟ್ ಮಾಡಿದರು. ನಂತರ ವಾಷಿಂಗ್ಟನ್ ಸುಂದರ ಉತ್ತಮ ಬೌಲಿಂಗ್ ನಡೆಸಿ ನಾಲ್ವರನ್ನು ಪೆವಿಲಿಯನ್‌ಗೆ ಕಳಿಸಿದರು.
ಭಾರತದ ಪರ ವಾಷಿಂಗ್ಟನ್ ಸುಂದರ 22ಕ್ಕೆ 4, ಮೊಹಮ್ಮದ ಸಿರಾಜ್ 31ಕ್ಕೆ 2, ಜಸ್‌ಪ್ರೀತ್ ಬುಮ್ರಾ 38ಕ್ಕೆ 2 ಹಾಗೂ ನಿತೇಶ್ ರೆಡ್ಡಿ ಮತ್ತು ಆಕಾಶ ದೀಪ ತಲಾ 1 ವಿಕೆಟ್ ಪಡೆದರು.