ಉತ್ತಮ ಮಳೆ; ಗೊಬ್ಬರಕ್ಕಾಗಿ ರೈತರ ಪರದಾಟ, ಅಂಗಡಿಗಳಿಗೆ ಬೀಗ

0
77

ಹುಬ್ಬಳ್ಳಿ: ಈ ಭಾಗದಲ್ಲಿ ಉತ್ತಮ ಮುಂಗಾರು ಮಳೆ ಆಗಿದ್ದು, ಶೇ. 98ರಷ್ಟು ಬಿತ್ತನೆ ಕಾರ್ಯವೂ ಪೂರ್ಣಗೊಂಡಿದೆ. ಆದರೆ, ಬೆಳೆದಿರುವ ಫಸಲಿಗೆ ಹಾಕಲು ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ರೈತರು ರೊಚ್ಚಿಗೆದ್ದಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಗೊಬ್ಬರದ ಕೊರತೆ ಕಂಡುಬರುತ್ತಿದೆ.

ಹಾವೇರಿ, ಗದಗ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಭಾಗ ಸೇರಿದಂತೆ ವಿವಿಧೆಡೆ ಗೊಬ್ಬರದ ಅಭಾವ ಎದುರಾಗಿದೆ. ಗೊಬ್ಬರದ ಅಂಗಡಿಗಳ ಎದುರು ಉದ್ದನೆಯ ಸಾಲು ಕಂಡು ಬರುತ್ತಿದ್ದು, ಅಂಗಡಿಯವರ ಜೊತೆ ವಾಗ್ವಾದ ನಡೆಯುತ್ತಿದೆ.

ಗದಗ ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ಮುಳಗುಂದ ಮತ್ತಿತರ ಪಟ್ಟಣಗಳಲ್ಲಿ ರಸಗೊಬ್ಬರ ಅಂಗಡಿಗಳ ಮುಂದೆ ನೂರಾರು ಜನ ಮುಂಜಾನೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಯೂರಿಯಾ ಸಿಗದೆ ಬರಿಗೈನಲ್ಲಿ ವಾಪಸ್ ಆಗುತ್ತಿದ್ದಾರೆ.

ಅಂಗಡಿಯವರು 15-20 ಜನರಿಗೆ ಗೊಬ್ಬರ ನೀಡಿದ ಕೂಡಲೇ ದಾಸ್ತಾನು ಮುಗಿದಿದೆ. ಎರಡು ಮೂರು ದಿನದಲ್ಲಿ ದಾಸ್ತಾನು ಬಂದ ನಂತರ ವಿತರಿಸುವುದಾಗಿ ಹೇಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಗೆ ಬಂದಿರುವ ಯೂರಿಯಾ ಗೊಬ್ಬರವನ್ನು ನೆರೆಯ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ರೈತರು ರಾತ್ರೋ ರಾತ್ರಿ ಹೆಚ್ಚಿನ ದರವನ್ನು ನೀಡಿ ವಾಹನಗಳಲ್ಲಿ ಸಾಗಿಸುತ್ತಿದ್ದಾರೆಂಬುದು ರೈತರ ಆರೋಪವಾಗಿದೆ. ನೆರೆಯ ಜಿಲ್ಲೆಯ ದೊಡ್ಡ ದೊಡ್ಡ ರೈತರಿಗೆ ರಸಗೊಬ್ಬರ ಮಾರಾಟಗಾರರು ಹೆಚ್ಚಿನ ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದರಿಂದಲೇ ಜಿಲ್ಲೆಯ ರೈತರಿಗೆ ಗೊಬ್ಬರ ದೊರೆಯುತ್ತಿಲ್ಲ. ರಸಗೊಬ್ಬರ ಮಾರಾಟಗಾರರ ಕುತಂತ್ರದಿಂದಲೇ ಪರದಾಡುವಂತಾಗಿದೆಯೆಂದು ರೈತರು ಆರೋಪಿಸುತ್ತಿದ್ದಾರೆ.

ಅಂಗಡಿಗೆ ಬೀಗ: ಗಜೇಂದ್ರಗಡದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಪಟ್ಟಣದ ರಸಗೊಬ್ಬರ ಅಂಗಡಿಯವರೊಂದಿಗೆ ತೀವ್ರ ವಾಗ್ವಾದ ನಡೆಸಿ ಅಂಗಡಿಗೆ ಬೀಗ ಹಾಕಿದ ಘಟನೆ ಗುರುವಾರ ನಡೆದಿದೆ. ರೂ. 500 ಟಾನಿಕ್ ಹಾಗೂ ರೂ. 350 ಬೆಲೆಯನ್ನು ಯೂರಿಯಾ ಗೊಬ್ಬರಕ್ಕೆ ನೀಡುವಂತೆ ಹೇಳಿದಾಗ ಮುಂಜಾನೆಯಿಂದ ಗೊಬ್ಬರಕ್ಕಾಗಿ ಸರದಿಸಾಲಿನಲ್ಲಿ ನಿಂತಿದ್ದ ರೈತರ ಸಹನೆಯ ಕಟ್ಟೆ ಒಡೆದಿದೆ. ಆಕ್ರೋಶಗೊಂಡ ಕೆಲ ರೈತರು ಅಂಗಡಿಯ ಬಾಗಿಲು ಹಾಕಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಅಂಗಡಿಯವರು, ರೈತರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಲಾಠಿಜಾರ್ಜ್‌: ರಾಣೆಬೇನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಮತ್ತು ಅಧಿಕಾರಿಗಳ ಮಧ್ಯೆ ಗಲಾಟೆ ನಡೆದಿದೆ. ಹೊಲದಲ್ಲಿನ ಕೆಲಸವನ್ನು ಬಿಟ್ಟು ರೈತರು ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ಗೊಬ್ಬರಕ್ಕಾಗಿ ನಿಂತಿದ್ದಾರೆ. ಈ ವೇಳೆ ಒಬ್ಬರಿಗೆ ಒಂದೇ ಚೀಲ ಕೊಡಲಾಗುವುದು ಎಂದು ಹೇಳುತ್ತಿದ್ದಂತೆ ನೂರಾರು ರೈತರು ಸೊಸೈಟಿ ಒಳಗೆ ನುಗ್ಗಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಜಾರ್ಜ್‌ ಮಾಡಿದ್ದು, ಗೊಬ್ಬರ ವಿತರಣೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿಸಿದ್ದಾರೆ.

ಬಿಜೆಪಿ ಆಕ್ರೋಶ: ರಸಗೊಬ್ಬರ ಕೊರತೆ ಕುರಿತು ಕರ್ನಾಟಕ ಬಿಜೆಪಿ ಸಹ ಸರ್ಕಾರವನ್ನು ಟೀಕಿಸಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪಕ್ಷ, ‘ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ಪ್ರಾಯೋಜಿತ ಗೊಬ್ಬರದ ಅಭಾವ ಎದುರಾಗಿದೆ. ಕಾಳ ಸಂತೆಕೋರರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪರ್ಕ ಸಾಧಿಸಿ ರೈತರನ್ನು ಕತ್ತಲಲ್ಲಿಡುತ್ತಿದೆಯೇ ಎನ್ನುವ ಅನುಮಾನ ರೈತ ಬಳಗವನ್ನು ಕಾಡುತ್ತಿದೆ. ಗೊಬ್ಬರ ವಿತರಣೆಯಲ್ಲೂ ಭ್ರಷ್ಟಾಚಾರದ ಕಮಟು ವಾಸನೆ ಮೂಗಿಗೆ ಬಡಿಯುತ್ತಿದೆ’ ಎಂದು ಹೇಳಿದೆ.

‘ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ದುಪ್ಪಟ್ಟು ದರಗಳಿಗೆ ಗೊಬ್ಬರ ಲಭ್ಯವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದರೂ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ದುರಂತವೇ ಸರಿ. ಕಾಳಸಂತೆಕೋರರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಪ್ಪಕಾಣಿಕೆ ಸಂದಾಯವಾಗುತ್ತಿದೆಯಾ?’ ಎಂದು ಪ್ರಶ್ನೆ ಮಾಡಿದೆ.

Previous articleಬುದ್ಧಿಮಾಂದ್ಯ ಮಗುವಿನ ಮೂಗಿನಲ್ಲಿ ಸಿಕ್ತು 14 ವಸ್ತುಗಳು
Next articleಜಾಮೀನು ಅರ್ಜಿ ತಿರಸ್ಕಾರ, ಪ್ರಜ್ವಲ್ ರೇವಣ್ಣಗೆ ಜೈಲೇಗತಿ

LEAVE A REPLY

Please enter your comment!
Please enter your name here