India-England 5th Test: ಇಂಗ್ಲೆಂಡ್‌ ಪ್ಲೇಯಿಂಗ್ 11 ಪ್ರಕಟ

0
87

ಲಂಡನ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್‌ ಕ್ರಿಕೆಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ತನ್ನ ಪ್ಲೇಯಿಂಗ್‌ 11 ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಗುರುವಾರ ಜುಲೈ 31ರಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಭಾರತ ತಂಡಕ್ಕೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಇಂಗ್ಲೆಂಡ್‌ ಪಂದ್ಯವನ್ನು ಗೆದ್ದರೆ ಅಥವಾ ಭಾರತ ಸೋತರೆ ಸರಣಿ ಇಂಗ್ಲೆಂಡ್‌ ಪಾಲಾಗಲಿದೆ. ಭಾರತ ಪಂದ್ಯವನ್ನು ಗೆದ್ದರೆ ಸರಣಿ 2-2 ರಿಂದ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಯಲಿ 2-1 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್‌ ತಂಡಕ್ಕೆ ಈ ಪಂದ್ಯವೂ ಕೂಡ ನಿರ್ಣಾಯಕವಾಗಿದೆ. ಆದರೆ, ಈ ಪಂದ್ಯದಿಂದ ನಾಯಕ ಬೆನ್ ಸ್ಟೋಕ್ಸ್ ಗಾಯದಿಂದಾಗಿ ಹೊರಗುಳಿಯಲಿದ್ದು, ಅವರ ಸ್ಥಾನವನ್ನು ಓಲಿ ಪೋಪ್ ವಹಿಸಲಿದ್ದಾರೆ.

ಹನ್ನೊಂದರ ಪಟ್ಟಿಯಲ್ಲಿ ಜೋಫ್ರಾ ಆರ್ಚರ್, ಲಿಯಾಮ್ ಡಾಸನ್ ಮತ್ತು ಬ್ರೈಡನ್ ಕಾರ್ಸ್ ಅವರನ್ನೂ ಕೂಡ ಕೈ ಬಿಡಲಾಗಿದ್ದು, ಅವರ ಸ್ಥಾನದಲ್ಲಿ ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್ ಮತ್ತು ಜೇಮಿ ಓವರ್ಟನ್ ತಂಡವನ್ನು ಸೇರಿಕೊಂಡಿದ್ದಾರೆ.

ಇಂಗ್ಲೆಂಡ್‌ ಇದುವರೆಗೆ ನಡೆದ ಪಂದ್ಯಗಳಲ್ಲಿ ಕೇವಲ ಒಂದೊಂದು ಬದಲಾವಣೆಗಳನ್ನು ಮಾಡಿತ್ತು. ಆದರೆ ಕೊನೆಯ ಪಂದ್ಯದ ಅಚ್ಚರಿಯೆಂದರೆ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಅಲ್ಲದೇ ತಂಡದ ನಾಯಕನನ್ನೇ ಬದಲಾಯಿಸಿದ್ದು ಇನ್ನೊಂದು ವಿಶೇಷ.

ಸರಣಿಯಲ್ಲಿ ಆಲ್‌ರೌಂಡ ಪ್ರದರ್ಶನ ನೀಡಿರುವ ನಾಯಕ ಬೆನ್ ಸ್ಟೋಕ್ಸ್ ಬಲ ಭುಜದ ಗಾಯದಿಂದಾಗಿ ಹೊರಗುಳಿದಿರುವುದು ಇಂಗ್ಲೆಂಡ್‌ ತಂಡಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ. ಬೆನ್ ಸ್ಟೋಕ್ಸ್ ಸರಣಿಯಲ್ಲಿ 17 ವಿಕೆಟ್‌ ಕಬಳಿಸಿದ್ದು, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದೆನಿಸಿಕೊಂಡಿದ್ದಾರೆ. ಅಲ್ಲದೇ ನಾಲ್ಕನೇ ಪಂದ್ಯದಲ್ಲಿ 198 ಎಸೆತಗಳನ್ನು ಎದುರಿಸಿ 141 ರನ್‌ಗಳನ್ನು ಸಿಡಿಸಿದ್ದಾರೆ. ಸರಣಿಯಲ್ಲಿ ಒಟ್ಟು 304 ರನ್‌ ಗಳಿಸಿದ್ದಾರೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸುವ ಮೂಲಕ ಸರಣಿ ಸಮವಾಗಿಸುವ ಕನಸನ್ನು ಉಳಿಸಿಕೊಂಡಿದೆ. ಮೊದಲ ಹಾಗೂ ಮೂರನೇ ಪಂದ್ಯದಲ್ಲಿ ಸೋಲುಕಂಡಿರುವ ಭಾರತ ಸರಣಿಯಲ್ಲಿ 2-1 ಹಿನ್ನಡೆಯನ್ನು ಪಡೆದಿದೆ. ಆದರೆ, ಇಂಗ್ಲೆಂಡ್‌ ಸರಣಿ ಗೆಲ್ಲಬೇಕಾದರೆ ಉಳಿದ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಬೇಕೆಂಬ ಅನಿವಾರ್ಯ ಇಲ್ಲದಿದ್ದರೂ ಕೂಡ ಕನಿಷ್ಟ ಪಕ್ಷ ಆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ.

ಇಂಗ್ಲೆಂಡ್‌ನ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್(ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್.

Previous articleBank Holiday: ಆಗಸ್ಟ್‌ನಲ್ಲಿ ಬ್ಯಾಂಕ್‌ಗಳಿಗೆ 15 ದಿನ ರಜೆ, ಪಟ್ಟಿ
Next articleಬ್ರಹ್ಮಪುತ್ರ ನದಿಗೆ ಡ್ಯಾಂ ನಿರ್ಮಾಣ ಆರಂಭಿಸಿದ ಚೀನಾ

LEAVE A REPLY

Please enter your comment!
Please enter your name here