Belagavi: ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ವಿವಾದ ಪ್ರಧಾನಿ ಅಂಗಳಕ್ಕೆ

0
128

ವಿಲಾಸ ಜೋಶಿ
ಬೆಳಗಾವಿ: ಐತಿಹಾಸಿಕ ಟಿಳಕವಾಡಿ ಪ್ರದೇಶದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣವು ಸ್ಥಳೀಯರಿಗೆ ಈಗ ದುರ್ಗಮವಾಗುತ್ತಿದೆ. ಇದರಿಂದ 500ಕ್ಕೂ ಮನೆಗಳು, 3 ದೇವಾಲಯಗಳು, 7 ಶಾಲೆಗಳು ಮತ್ತು ಸಾವಿರಕ್ಕೂ ಹೆಚ್ಚು ವ್ಯಾಪಾರ ವಹಿವಾಟುಗಳಿಗೆ ಪ್ರವೇಶ ಮಾರ್ಗಗಳು ಬಂದ್ ಆಗಲಿವೆ.

ಮೇಲಾಗಿ ಇದೇ ಪ್ರದೇಶದಲ್ಲಿರುವ ಹಿಂದೂ ದೇವಸ್ಥಾನಗಳಿಗೆ ಈ ಮೇಲ್ಸೆತುವೆ ನಿರ್ಮಾಣದಿಂದ ದೊಡ್ಡ ಹೊಡೆತ ಬೀಳಲಿದೆ. ಇದರಿಂದ ಸಿಡಿದೆದ್ದ ಟಿಳಕವಾಡಿ ಪ್ರದೇಶದ ನಿವಾಸಿಗಳು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಬೆಳಗಾವಿಯ ಪಾಲಿಕೆ ಹಿಡಿದು, ಜಿಲ್ಲಾಧಿಕಾರಿ, ಶಾಸಕರು ಮತ್ತು ಸಂಸದರು ಸೇರಿದಂತೆ ಎಲ್ಲರಿಗೂ ಮನವಿ ಪತ್ರ ಕೊಟ್ಟು ತಮ್ಮ ಸಮಸ್ಯೆಗಳನ್ನು ಹೇಳಿ ಬಂದಿದ್ದಾರೆ.

ಆದರೆ, ಕೊನೆಯ ಪ್ರಯತ್ನ ಎನ್ನುವಂತೆ ಸಾವಿರಕ್ಕೂ ಹೆಚ್ಚು ಸಹಿಯುಳ್ಳ ಮನವಿ ಪತ್ರವನ್ನು ಕೇಂದ್ರದ ಸಚಿವ ಸೋಮಣ್ಣ ಅವರಿಗೆ ಸಲ್ಲಿಸಿದ್ದರು. ಈಗ ಅದೇ ಮನವಿ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಿ ಮುಂದೇನು ಎನ್ನುವಂತೆ ಎದುರು ನೋಡುತ್ತಿದ್ದಾರೆ. ಕೊನೆಗೆ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರವನ್ನೂ ಕೆಲವರು ಮಾಡಿದ್ದಾರೆಂದು ಗೊತ್ತಾಗಿದೆ.

ಬೆಳಗಾವಿಯ ಟಿಳಕವಾಡಿಯಲ್ಲಿ ಟಿ ಆಕಾರದ ರೇಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದ್ದು ಈ ಎಲ್ಲಕ್ಕೂ ಮೂಲ ಕಾರಣ. ಆದರೆ ಅಲ್ಲಿನ ನಿವಾಸಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ `ಟಿ’ ಆಕಾರದ ಬದಲು ಮೆಟ್ರೋ ಮಾದರಿಯಲ್ಲಿ ಸೇತುವೆ ನಿರ್ಮಿಸಿ ರೈಲ್ವೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಧಾನಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಬೆಳಗಾವಿ ನಗರದ ಟಿಳಕವಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ 2ನೇ ರೈಲ್ವೆ ಗೇಟ್(ಎಲ್‌ಸಿ-382) ರೈಲ್ವೆ ಓವರ್‌ಬ್ರಿಜ್ ನಿರ್ಮಾಣ ತಕ್ಷಣ ಸ್ಥಗಿತಗೊಳಿಸಬೇಕು ಮನವಿ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ನಿರ್ಮಾಣದಿಂದ ಈ ಭಾಗದ ಜನಸಂಚಾರ, ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಕೇಂದ್ರಗಳ ಪ್ರವೇಶಕ್ಕೂ ಇದು ತೀವ್ರ ಅಡಚಣೆ ಉಂಟುಮಾಡಲಿದೆ ಎಂದು ದೂರಿದ್ದಾರೆ.

ಸಂಚಾರ ಅಸ್ತವ್ಯಸ್ತ: ಈ ಸೇತುವೆ ನಿರ್ಮಾಣದ ಕಾಮಗಾರಿ ಆರಂಭವಾದರೆ ಸುತ್ತ-ಮುತ್ತಲಿನ ಪ್ರದೇಶಗಳು ಮುಖ್ಯ ರಸ್ತೆಯಿಂದ ಸಂಪೂರ್ಣ ಬೇರ್ಪಡಿಸಲ್ಪಡುವ ಸಂಭವವಿದೆ. ಈ ಮೂಲಕ ಆಸ್ಪತ್ರೆ, ಶಾಲೆಗೆ ಹೋಗುವ ದಾರಿಯೇ ಬಂದ್ ಆಗುತ್ತದೆ. ಇಲ್ಲಿನ ಸುಮಾರು 6,000 ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದ ಸಂವಿಧಾನಾತ್ಮಕ ಹಕ್ಕುಗಳನ್ನು ಜನ ಕಳೆದುಕೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ವ್ಯಾಪಾರಿಗಳಿಗೆ ಆರ್ಥಿಕ ಬಿಕ್ಕಟ್ಟು: ಈ ಸೇತುವೆ ನಿರ್ಮಾಣದಿಂದ ಪಾದಚಾರಿ ಸಂಚಾರ ಕಡಿಮೆಯಾಗುತ್ತದೆ. ವ್ಯಾಪಾರ ಸಂಪೂರ್ಣ ಕುಸಿಯಲಿದೆ ಎಂಬ ಆತಂಕದಲ್ಲಿ ವ್ಯಾಪಾರಸ್ಥರಿದ್ದಾರೆ. ಹಲವಾರು ಅಂಗಡಿಗಳು ಈಗಾಗಲೇ ಮುಚ್ಚಲ್ಪಟ್ಟಿದ್ದು ಸೇತುವೆ ಕಾರ್ಯ ಮುಂದುವರೆದರೆ ಇನ್ನೂ ಹಲವು ಜನರಿಗೆ ಉದ್ಯೋಗ ಹಾನಿ ಸಂಭವಿಸಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕೇವಲ 600 ಮೀಟರ್ ಅಂತರದಲ್ಲಿ ಈಗಾಗಲೇ ಎಲ್‌ಸಿ-381 ಮತ್ತು ಎಲ್‌ಸಿ-383 ಬಳಿ ಸೇತುವೆಗಳಿವೆ. ಈ ಭಾಗದ ಟ್ರಾಫಿಕ್ ನಿಭಾಯಿಸಲು ಸಾಕಷ್ಟು ಇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಮತ್ತೊಂದು ಹೊಸ ಸೇತುವೆ ವೈಜ್ಞಾನಿಕತೆ ಇಲ್ಲದ ನಿರ್ಧಾರವೆಂದು ಪ್ರಧಾನಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಏನು ಹೇಳುತ್ತದೆ?: ಟಿಳಕವಾಡಿಯ 2ನೇ ರೈಲ್ವೆ ಗೇಟ್(ಎಲ್‌ಸಿ-382) ಬಳಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳೀಯರು ಎತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ನಿರ್ಣಾಯಕ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 2018ರಲ್ಲಿ ಭಾರತೀಯ ರೈಲ್ವೆ ಇಲಾಖೆ ಹೊಸ ವಿನ್ಯಾಸ ದೃಢೀಕರಿಸಿದ್ದು ಪಾಲಿಕೆ ಸಹ ಸಹಿ ಹಾಕಿದೆ. ಇದರ ಅನುಸಾರವಾಗಿ 2025ರ ಫೆ. 21ರಂದು ರೂ. 32.43 ಕೋಟಿ ಮೊತ್ತದ ಟೆಂಡರ್ ಮಂಜೂರು ಮಾಡಲಾಗಿದೆ.

ಇಲ್ಲಿ ಅಂತಸ್ತು ವಿನ್ಯಾಸಕ್ಕಾಗಿ ಅಗತ್ಯವಿರುವ ಮಣ್ಣು ತಪಾಸಣಾ ಕಾರ್ಯಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸೇತುವೆ ನಿರ್ಮಾಣದ ಬದಲಿಗೆ ಹಳೆಯ ಲೆವೆಲ್ ಕ್ರಾಸಿಂಗ್ ಗೇಟ್ ಉಳಿಸಬೇಕು ಎಂಬ ಆಗ್ರಹದೊಂದಿಗೆ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ಸೆತುವೆ ನಿರ್ಮಾಣದಲ್ಲಿ ಉಂಟಾಗಿರುವ ಅಳವಡಿಕೆಯ ವಿಚಾರಗಳ ಬಗ್ಗೆ 2025ರ ಮೇ 6ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಸಂಸದರು ಮತ್ತು ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ, 2025ರ ಮೇ 8ರಂದು ಬೆಳಗಾವಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, 22.01.2018 ರ ಜಿಎಡಿ ಆಧಾರದ ಮೇಲೆಯೇ ಮೇಲ್ಸೆತುವೆ ಕಟ್ಟಬೇಕು ಎಂಬ ನಿರ್ದೇಶನ ನೀಡಿದ್ದಾರೆ ಎಂದು ರೈಲ್ವೆ ಇಲಾಖೆ ತನ್ನಪತ್ರದಲ್ಲಿ ಸ್ಪಷ್ಟಪಡಿಸಿದೆ.

ರೈಲ್ವೆ ಇಲಾಖೆ ಹೇಳಿದಂತೆ ಅನುಮೋದಿತ ನೇರ ಅಳವಡಿಕೆಯಂತೆ ಸೇತುವೆ ನಿರ್ಮಿಸಬೇಕು. ಈ ವಿನ್ಯಾಸದಿಂದ ಹೊರಹೋಗಿ ‘ಖಿ-ಟೈಪ್’ ಅಳವಡಿಕೆಗೆ ಹೋಗುವುದು ಐಆರ್‌ಸಿ ವಿನ್ಯಾಸ ಮಾನದಂಡಗಳಿಗೆ ವಿರುದ್ಧವಾಗುತ್ತದೆ. ಇದರಿಂದಾಗಿ 224.20 ಚದರ ಮೀಟರ್ ಪ್ರದೇಶದ ಭೂಸ್ವಾಧೀನ ಪ್ರಸ್ತಾವನೆ 2025ರ ಫೆಬ್ರವರಿ 6ರಲ್ಲೇ ಸಲ್ಲಿಸಲಾಗಿದೆ ಎಂದು ಇಲಾಖೆ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಈ ಕುರಿತು ಸ್ಥಳೀಯ ನಿವಾಸಿಗಳ ಆತಂಕಗಳಿಗೆ ಸ್ಪಷ್ಟನೆ ನೀಡುವ ಹಾಗೂ ತಾಂತ್ರಿಕ ವಿವರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ, ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಭೆ ಕರೆಯುವಂತೆ ರೈಲ್ವೆ ಇಲಾಖೆ ಕೋರಿದೆ.

ಧಾರ್ಮಿಕ ಕೇಂದ್ರದ ಅಪಾಯ: ರೈಲ್ವೆ ಸೇತುವೆ ನಿರ್ಮಾಣದ ಸ್ಥಳದಲ್ಲಿ ಹಳೆಯ ಗಣೇಶ ಮಂದಿರವಿದೆ. ಈ ಕಾಮಗಾರಿಯಿಂದ ದೇವಸ್ಥಾನ ಧ್ವಂಸಗೊಳ್ಳುವ ಸಾಧ್ಯತೆಯಿದೆ. ಇದರಿಂದ ಧಾರ್ಮಿಕ ಸ್ವಾತಂತ್ರ‍್ಯ ಉಲ್ಲಂಘನೆಯಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ. ಮೇಲ್ಸತುವೆ ನಿರ್ಮಾಣದ ಬದಲಾಗಿ ಬೆಳಗಾವಿ ನಗರದಲ್ಲಿ ರೈಲು ಹಾದಿಗಳನ್ನು ವಾಯಾ ದಕ್ಟ್ ಅಂದರೆ ಮೆಟ್ರೋ ಮಾದರಿಯಲ್ಲಿ ನಿರ್ಮಿಸಿದರೆ ಉತ್ತಮ ಎನ್ನುವ ಸಲಹೆಯನ್ನು ಸ್ಥಳೀಯರು ನೀಡಿದ್ದಾರೆ.

ಮೋದಿ ಮಧ್ಯಸ್ಥಿಕೆ ಅವಶ್ಯ: ಬೆಳಗಾವಿಯು ಐತಿಹಾಸಿಕವಾಗಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೆಸ್ ಅಧಿವೇಶನದ ನೆಲೆ. ಅಂತಹ ನಗರದಲ್ಲಿ ಮೇಲ್ಸೆತುವೆ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ದಿನೇ ದಿನೇ ಹೆಚ್ಚಾಗುತ್ತಿದೆ. ಈಗ ಪ್ರಧಾನಿ ಕಾರ್ಯಾಲಯದಿಂದ ಏನು ಪ್ರತಿಕ್ರಿಯೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬೆಳಗಾವಿಯ ಜನತೆ ಇದ್ದಾರೆ.

Previous articleVande Bharat Train: ವಂದೇ ಭಾರತ್ ಟಿಕೆಟ್ ಬುಕ್‌ ಮಾಡಲು ಹೊಸ ನಿಯಮ
Next article2 ತಿಂಗಳಲ್ಲಿ ಯತ್ನಾಳ್ ಬಿಜೆಪಿಗೆ ವಾಪಸ್…ಷರತ್ತುಗಳು ಅನ್ವಯ!

LEAVE A REPLY

Please enter your comment!
Please enter your name here