ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಫ್ಲೈ ಓವರ್ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜಿಲ್ಲೆಯ ಜನರು ಸದಾ ಚರ್ಚೆ ಮಾಡುವ ವಿಚಾರ. ಕಾಮಗಾರಿ ಯಾವಾಗ ಮುಗಿಯುತ್ತದೆ? ಎಂಬ ಪ್ರಶ್ನೆ ಎಲ್ಲರೂ ಕೇಳುತ್ತಿದ್ದಾರೆ. ಈಗ ಈ ಕಾಮಗಾರಿ ಕುರಿತ ವಿಶೇಷ ವರದಿಯೊಂದು ಬಂದಿದೆ.
ಹುಬ್ಬಳ್ಳಿ: ಫ್ಲೈ ಓವರ್ ನಿರ್ಮಾಣ ಕಾಮಗಾರಿಗಾಗಿ ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತದ ಪಕ್ಕದಲ್ಲಿಯೇ ಇರುವ ರಾಣಿ ಚನ್ನಮ್ಮ ಮೈದಾನ ಈದ್ಗಾ ಮೈದಾನದ ಕಬ್ಬಿಣದ ತಡೆಗೋಡೆ ತೆರವುಗೊಳಿಸಲಾಗಿದೆ. ಗದಗ ರಸ್ತೆ ಮತ್ತು ವಿಜಯಪುರ ರಸ್ತೆಗೆ ಅಂಟಿಕೊಂಡಿದ್ದ ಎರಡು ಕಡೆಯ ಕಬ್ಬಿಣದ ತಡೆಗೋಡೆ ತೆರವುಗೊಳಿಸಲಾಗಿದ್ದು, ಇದರಿಂದ ಮೇಲ್ಸೇತುವೆ ನಿರ್ಮಾಣದ ನಂತರ ಮೈದಾನದ ವ್ಯಾಪ್ತಿ ಶೇ.15 ರಿಂದ 20 ರಷ್ಟು ಚಿಕ್ಕದಾಗಲಿದೆ.
ಒಟ್ಟು 1.5 ಎಕರೆ ಪ್ರದೇಶದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ (ಈದ್ಗಾ) ಮೈದಾನದ ಎರಡು ಕಡೆಯ ಕಬ್ಬಿಣದ ತಡೆಗೋಡೆ ತೆರವುಗೊಳಿಸಲಾಗುತ್ತಿದೆ. ವಿವಾದಿತ ಮೈದಾನದ ಕಬ್ಬಿಣದ ಗ್ರಿಲ್ ತಡೆಗೋಡೆ ತೆರವು ಕಾರ್ಯಕ್ಕೆ ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಹಾನಗರ ಪಾಲಿಕೆಗೆ 2024ರ ಜುಲೈ 23ರಂದೇ ಪತ್ರ ಬರೆದಿದ್ದರು, ಈಗ ತೆರವು ಕಾರ್ಯ ನಡೆದಿದೆ.
ಭೂಸ್ವಾಧೀನಕ್ಕಾಗಿ ಚನ್ನಮ್ಮ ವೃತ್ತದಿಂದ ಗದಗ ರಸ್ತೆ ಮತ್ತು ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ತಲಾ 18.5 ಮೀ. ಜಾಗ ಗುರುತಿಸಲಾಗಿತ್ತು. ಅದರಂತೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಈ ಹಿಂದೆ 1.5 ಎಕರೆ ವಿಸ್ತೀರ್ಣದಲ್ಲಿದ್ದ ರಾಣಿ ಚನ್ನಮ್ಮ (ಈದ್ಗಾ) ಮೈದಾನದ ಸುತ್ತಳತೆ ಅಂದಾಜು 38 ಮೀ. ಕಿರಿದಾಗಲಿದೆ.
ಭೂಸ್ವಾಧೀನಕ್ಕಾಗಿ 130 ಕೋಟಿ: ಜನನಿಬಿಡ ರಸ್ತೆಯಲ್ಲಿ ಫೈ ಓವರ್ ಅನ್ನು ಸುಗಮಗೊಳಿಸಲು, ಲೋಕೋಪಯೋಗಿ ಇಲಾಖೆ (ರಾಷ್ಟ್ರೀಯ ಹೆದ್ದಾರಿ ವಿಭಾಗ) ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗಳಲ್ಲಿ 18.5 ಮೀಟರ್ ಅಗಲದ ಪ್ರದೇಶವನ್ನು ಗುರುತಿಸಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ತಿಗಳ ಮೇಲೆ ಗುರುತು ಹಾಕಿದ್ದಾರೆ. ಈ ಯೋಜನೆಗಾಗಿ 120 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅವುಗಳಲ್ಲಿ 18 ಆಸ್ತಿಗಳು ಪೊಲೀಸ್ ಠಾಣೆ, ಮಿನಿ ವಿಧಾನಸೌಧ, ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಸೇರಿವೆ.
ಈ ಕುರಿತು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, “ಮೈದಾನದ ಮಧ್ಯ ಭಾಗದಲ್ಲಿರುವ ಈದ್ಗಾ ಕಟ್ಟಡದ ರಕ್ಷಣೆಗೆ ಸುಮಾರು 10-20 ಮೀಟರ್ ಅಂತರದಲ್ಲಿ ತಾತ್ಕಾಲಿಕ ತಗಡಿನ ಶೀಟ್ ಅಳವಡಿಸಲಾಗಿದೆ. ಫೈ ಓವರ್ ಕಾಮಗಾರಿ ಮುಗಿದ ಬಳಿಕ ಮತ್ತೆ ಮೊದಲಿನಂತೆ ರಾಣಿ ಚನ್ನಮ್ಮ ಮೈದಾನಕ್ಕೆ ಕಬ್ಬಿಣದ ಸರಳುಗಳಿಂದ ಗೋಡೆ ನಿರ್ಮಿಸುವ ಯೋಜನೆ ಇದೆ” ಎಂದು ಹೇಳಿದ್ದಾರೆ.
ಅಲ್ಲದೇ ಈ ಕಾಮಗಾರಿಗಾಗಿ ಉಪನಗರ ಪೊಲೀಸ್ ಠಾಣೆ ಕಟ್ಟಡದ ಶೇ. 20ರಷ್ಟು ಭಾಗವೂ ತೆರವು ಆಗಲಿದೆ. ಉಳಿದ 102 ಆಸ್ತಿಗಳು ಖಾಸಗಿಯಾಗಿವೆ. ಭೂಸ್ವಾಧೀನಕ್ಕಾಗಿ ಸರ್ಕಾರವು 130 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮೂಲಗಳ ಪ್ರಕಾರ, 21 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 36 ಅರ್ಜಿಗಳನ್ನು ಶೀಘ್ರದಲ್ಲೇ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.