2 ತಿಂಗಳಲ್ಲಿ ಯತ್ನಾಳ್ ಬಿಜೆಪಿಗೆ ವಾಪಸ್…ಷರತ್ತುಗಳು ಅನ್ವಯ!

0
75

ವಿಜಯಪುರ: “ನನಗೆ ಮೂರು ಬಾರಿ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಆದರೆ, ಎರಡು ತಿಂಗಳಲ್ಲಿ ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳುವುದು ನಿಶ್ಚಿತ. ಆದರೆ ನೋ ಕಾಂಪ್ರಮೈಸ್ ವಿತ್ ವಿಜಯೇಂದ್ರ ಆ್ಯಂಡ್ ಅವರ ಪೂಜ್ಯ ತಂದೆ…” ಎಂದು ಹೇಳುವ ಮೂಲಕ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಜೆಪಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷಕ್ಕೆ ಮರಳುವ ಸಂದೇಶದ ಜೊತೆಗೆ ಯಾವ ಕಾರಣಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ರಾಜಿಯಾಗಲು ಸಾಧ್ಯವಿಲ್ಲ” ಎಂಬ ಸಂದೇಶವನ್ನು ರವಾನಿಸಿದ್ದಾರೆ.

“ನಾನು ಪಕ್ಷಕ್ಕೆ ಎರಡು ತಿಂಗಳಲ್ಲಿ ಮತ್ತೇ ಮರಳಲಿದ್ದೇನೆ. ವಿಜಯೇಂದ್ರನ ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಹೈಕಮಾಂಡ್‌ಗೆ ಕೊಡಲು ಸಿದ್ಧ. ರಾಜ್ಯಾಧ್ಯಕ್ಷ ಬದಲಾವಣೆಯಾಗಬೇಕು ಎಂಬ ನನ್ನ ನಿಲುವು ಸ್ಪಷ್ಟ” ಎಂದರು. ಈ ಮೂಲಕ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಬೆಳವಣಿಗೆಯ ಸುಳಿವು ಕೊಟ್ಟರು.

“ಮಧ್ಯ ಕರ್ನಾಟಕ ದಾವಣಗೆರೆ ಭಾಗದಲ್ಲಿ ಶಾಮನೂರು ಕುಟುಂಬ ಹೇಳಿದಂತೆ ಬಿಜೆಪಿ ಕೇಳುತ್ತದೆ. ಅತ್ತ ಬೀದರ್ ಬಿಜೆಪಿ ಈಶ್ವರ ಖಂಡ್ರೆ ಕುಟುಂಬ ಹೇಳಿದಂತೆ ಕೇಳುತ್ತದೆ. ಆದರೆ ವಿಜಯಪುರ-ಬಾಗಲಕೋಟೆಯಲ್ಲಿ ವಿಜಯೇಂದ್ರ ಆಟ ನಡೆಯುವುದಿಲ್ಲ. ಆತನೇ ದಾವಣಗೆರೆಯಲ್ಲಿ ಶಾಮನೂರು ಕುಟುಂಬ ಲೋಕಸಭೆಯಲ್ಲಿ ಗೆಲ್ಲುವಂತೆ ಮಾಡಿದ್ದು” ಎಂದು ಯತ್ನಾಳ್ ಆರೋಪಿಸಿದರು.

“ನಾನು ಸದಾ ಜನರಪರ. ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ, ಅಲ್ಪಸಂಖ್ಯಾತ ಇಲಾಖೆಯ ಅನುದಾನವನ್ನು ಕೇವಲ ಮುಸ್ಲಿಂ ಬಡಾವಣೆಗಳಿಗೆ ಮೀಸಲಾಗಿರಿಸಲಾಗಿತ್ತು. ಅದನ್ನು ಪ್ರಬಲವಾಗಿ ವಿರೋಧಿಸಿದ ಪರಿಣಾಮ ಜೈನ ಮೊದಲಾದ ಸಮುದಾಯಗಳಿಗೆ ಅನುದಾನ ಹಂಚಿಕೆಯಾಯಿತು. ಮುಸ್ಲಿಂ ಸೇರಿದಂತೆ ಎಲ್ಲ ಬಡಾವಣೆಗಳಲ್ಲಿಯೂ ಅಭಿವೃದ್ಧಿ ಮಾಡಿದ್ದೇನೆ. ರಹೀಂ ನಗರದಲ್ಲೂ ಅಭಿವೃದ್ಧಿ ಕಾರ್ಯ ಮಾಡಿದ್ದಕ್ಕೆ ಮುಸ್ಲಿಮರೇ ನನ್ನನ್ನು ಸನ್ಮಾನಿಸಿದ್ದಾರೆ” ಎಂದರು.

ಯತ್ನಾಳ್ ಉಚ್ಛಾಟನೆ: ಹಿಂದೂ ಹುಲಿ, ಬಿಜೆಪಿಯ ಫೈರ್ ಬ್ರಾಂಡ್ ಎಂದೆಲ್ಲ ಕರೆಸಿಕೊಳ್ಳುವ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾರ್ಚ್‌ನಲ್ಲಿ 6 ವರ್ಷಗಳ ಅವಧಿಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಕೇಂದ್ರ ಬಿಜೆಪಿ ನಾಯಕರು ಆದೇಶವನ್ನು ಹೊರಡಿಸಿದ್ದರು.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಬೇಕು ಎಂದು ಪಟ್ಟು ಹಿಡಿದಿದ್ದ ನಾಯಕರಲ್ಲಿ ಯತ್ನಾಳ್ ಸಹ ಒಬ್ಬರು. ಯತ್ನಾಳ್ ಉಚ್ಚಾಟನೆ ಬಳಿಕ ಈ ಬಣದ ನಾಯಕರ ಚಟುವಟಿಕೆ ಕೊಂಚ ಕಡಿಮೆಯಾಗಿತ್ತು.

ಯತ್ನಾಳ್ ಉಚ್ಛಾಟನೆ ಬಳಿಕ ಪ್ರತಿಕ್ರಿಯೆ ನೀಡಿದ್ದ ಬಿ.ವೈ.ವಿಜಯೇಂದ್ರ, “ಅವರು ಹಿರಿಯ ನಾಯಕರು ತಿದ್ದಿಕೊಳ್ಳುವಂತೆ ಪಕ್ಷದ ವರಿಷ್ಠರು ಹಲವು ಅವಕಾಶಗಳನ್ನು ನೀಡಿದ್ದರು” ಎಂದು ಹೇಳಿದ್ದರು.

Previous articleBelagavi: ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ವಿವಾದ ಪ್ರಧಾನಿ ಅಂಗಳಕ್ಕೆ
Next articleಏರ್‌ ಇಂಡಿಯಾ ಮಾದರಿ ಮತ್ತೊಂದು ವಿಮಾನ ದುರಂತ: 15ಕ್ಕೂ ಹೆಚ್ಚು ಸಾವು

LEAVE A REPLY

Please enter your comment!
Please enter your name here