ಕಾಲ್ನಡಿಗೆ ಮೂಲಕವೇ ತೆರಳಬೇಕಾದರೆ ಎಷ್ಟೋ ಏಳು ಬೀಳುಗಳನ್ನು ಕಾಣುತ್ತೇವೆ. ಇಂಥಹ ಪರಿಸ್ಥಿತಿಯಲ್ಲಿ ಬರೋಬ್ಬರಿ ಆರುವರೆ ಅಡಿ ಎತ್ತರ ಮರಗಾಲನ್ನು ಕಾಲಿಗೆ ಕಟ್ಟಿಕೊಂಡು ದೂರದ ಆಂಧ್ರದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನವರೆಗೆ ಸುಮಾರು 550 ಕಿ.ಮೀ. ದೂರ ಕ್ರಮಿಸುತ್ತಿರುವದೆಂದರೆ ಅಸಾಮಾನ್ಯವೇ ಸರಿ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಣಗಂಡಿ ಗ್ರಾಮದ 21 ವರ್ಷದ ಯುವಕ ಶಿವಾನಂದ ಬಿದರಿ ಇಂಥಹ ಕಾರ್ಯದಲ್ಲಿ ತೊಡಗಿರುವದು ವಿಶೇಷ ಸಾಧನೆಯಾಗಿದೆ.
ಈ ಸಾಹಸಕ್ಕೆ ಕೈ ಹಾಕಿದ್ದು ಮೂರನೇಯ ಬಾರಿಯಾಗಿದ್ದು, ಈ ಮುಂಚೆ ಸುಮಾರು 3 ಮತ್ತು 4 ಅಡಿಯಷ್ಟು ಎತ್ತರದ ಮರಗಾಲನ್ನು ಕಟ್ಟಿಕೊಂಡು ನಡೆದ ಉದಾಹರಣೆಗಳಿವೆ.
5 ಅಡಿಯಷ್ಟು ಎತ್ತರದ ಮರಗಾಲಿನಿಂದ ಯಾರ ಸಹಾಯವಿಲ್ಲದೇ ಪಾದಯಾತ್ರೆ ನಡೆಸುತ್ತಿದ್ದಾನೆ.
ಕಳೆದ ಹದಿನೈದು ದಿನಗಳಿಂದ ದಿನಂಪ್ರತಿ 15-20 ಕಿ.ಮೀ. ನಷ್ಟು ನಡಿಗೆ ಮಾಡಿ ತರಬೇತಿ ಪಡೆದು, ನಂತರ ಯುಗಾದಿ ಪ್ರಯುಕ್ತ ಶ್ರೀಶೈಲದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿದ್ದೇನೆ ಎಂದು ಹೇಳುತ್ತಾನೆ ಶಿವಾನಂದ ಬಿದರಿ.

























