೩ ವರ್ಷದಲ್ಲಿ ೨೮೦ ಆನೆಗಳ ಅಸಹಜ ಸಾವು

0
14

ಬೆಂಗಳೂರು: ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ೨೮೦ಕ್ಕೂ ಹೆಚ್ಚು ಆನೆಗಳು ಅಸಹಜವಾಗಿ ಮೃತಪಟ್ಟಿವೆ. ಅದರಲ್ಲೂ ೩೦ಕ್ಕೂ ಹೆಚ್ಚು ಆನೆಗಳು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದು ಉಳಿದಂತೆ ಹೊಂಡದಲ್ಲಿ ಬಿದ್ದು, ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಸಾವು ಕಂಡಿವೆ.
ಚಿಕ್ಕಮಗಳೂರು ಜಿಲ್ಲೆಯ ಕೊಳಗಾಮೆ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ಆನೆಯೊಂದು ಮೃತಪಟ್ಟಿದ್ದು, ಜೂನ್ ೧೧ ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕ್ಯಾಂಪ್‌ನಲ್ಲಿ ಸೋಲಾರ್ ಬೇಲಿಗೆ ತಗುಲಿ ವಿದ್ಯುತ್ ಸ್ಪರ್ಶದಿಂದ ದಸರಾ ಆನೆ ಅಶ್ವತ್ಥಾಮ ಇಹಲೋಕ ತ್ಯಜಿಸಿರುವುದು ಇದಕ್ಕೆ ತಾಜಾ ಉದಾಹರಣೆ.
ಕಳೆದ ವರ್ಷದ ಗಣತಿಯಂತೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ೬,೩೯೫ ಆನೆಗಳಿವೆ. ಆದರೆ, ರಾಜ್ಯದಲ್ಲಿ ಆನೆಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ೨೦೨೪ ರಲ್ಲಿ ಇದುವರೆಗೆ ೩೭ ಆನೆಗಳು ಮೃತಪಟ್ಟಿವೆ. ಜನವರಿ ೨, ಫೆಬ್ರವರಿ ೬, ಮಾರ್ಚ್ ಏಳು, ಏಪ್ರಿಲ್ ಐದು, ಮೇ ೧೩, ಜೂನ್ ಎರಡು, ಜುಲೈ ಮತ್ತು ಆಗಸ್ಟ್ನಲ್ಲಿ ತಲಾ ಒಂದು ಆನೆ ಮೃತಪಟ್ಟಿದೆ. ಇವುಗಳಲ್ಲಿ, ಆರು ಸಾವುಗಳನ್ನು ಅಸಹಜ ಎಂದು ವರ್ಗೀಕರಿಸಲಾಗಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಇತ್ತೀಚಿನ ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಒದಗಿಸಿದ ಮಾಹಿತಿಯ ಪ್ರಕಾರ, ೨೦೧೯-೨೦ರಲ್ಲಿ ಎಂಟು ಆನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪಿವೆ, ೨೦೨೦-೨೧ರಲ್ಲಿ ಒಂಬತ್ತು ಆನೆಗಳು ಮೃತಪಟ್ಟಿವೆ. ೨೦೨೧-೨೨ರಲ್ಲಿ ಏಳು, ೨೦೨೨-೨೩ರಲ್ಲಿ ೧೫ ಮತ್ತು ೨೦೨೩-೨೪ರಲ್ಲಿ ೧೩. ಈ ಅಂಕಿಅಂಶಗಳ ಪ್ರಕಾರ, ೨೦೧೯-೨೪ರ ನಡುವೆ (ಜುಲೈವರೆಗೆ) ಬೇಟೆಯಾಡಿ ಅಥವಾ ವಿಷಪೂರಿತವಾಗಿ ಯಾವುದೇ ಆನೆಗಳು ಮೃತಪಟ್ಟಿಲ್ಲ. ಇನ್ನಾದರೂ ಆನೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ.

ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ಸಾವು
ಚಾಮರಾಜನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚಿನ ಆನೆಗಳು ಮೃತಪಟ್ಟಿವೆ, ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಈವರೆಗೆ ಚಾಮರಾಜನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ ೧೭ ಆನೆಗಳು ಸಾವಿಗೀಡಾಗಿವೆ. ಉಳಿದಂತೆ ಕೊಡಗು ೧೧, ಚಿಕ್ಕಮಗಳೂರು, ಮೈಸೂರು ವಲಯದಲ್ಲಿ ತಲಾ ೨, ಕೆನರಾ, ಮಂಗಳೂರು ಮತ್ತು ಬೆಂಗಳೂರು ವಲಯ ವ್ಯಾಪ್ತಿಯಲ್ಲಿ ತಲಾ ೧ ಆನೆಗಳು ಮೃತಪಟ್ಟಿವೆ. ಒಟ್ಟಾರೆ ಈ ವರ್ಷದ ಏಪ್ರಿಲ್‌ನಿಂದ ಈವರೆಗೆ ೩೫ ಆನೆಗಳು ಮೃತಪಟ್ಟಿದೆ.

Previous articleವಿದ್ಯುತ್‌ಗೆ ಇಲ್ಲದ ಜಿಎಸ್‌ಟಿ ಬ್ಯಾಟರಿ ವಾಹನಕ್ಕೆ ಏಕೆ
Next articleಬೀಳಲಿರುವ ಈ ಹನಿಗಳು