ವಿಧಾನ ಪರಿಷತ್ತು: ಐಟಿ ಉದ್ಯೋಗಿಗಳಿಗೆ ೧೪ ಗಂಟೆ ಕೆಲಸ ಎಂದು ಸುಳ್ಳು ವಿಷಯವನ್ನು ಬಿಂಬಿಸಲಾಗುತ್ತಿದೆ. ಇದು ಐಟಿ ಉದ್ಯೋಗಿಗಳಿಗೆ ಅಲ್ಲ. ಅಲ್ಲಿನ ಕಂಪನಿಗಳು ಯಾರೂ ಈ ವಿಷಯವನ್ನು ಪ್ರಸ್ತಾಪ ಮಾಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಉತ್ತರ ನೀಡಿದ ನಂತರ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಐಟಿ ಕಂಪನಿಗಳಲ್ಲಿ ೧೪ ಗಂಟೆ ಕೆಲಸ ಎಂಬ ತಪ್ಪು ಮಾಹಿತಿ ಹೋಗಿದೆ. ಅಂತಹ ಪ್ರಸ್ತಾಪವೇ ಇಲ್ಲ. ಈ ವಿಷಯವಾಗಿ ಐಟಿ ಕಂಪನಿಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿಯೇ ಇಲ್ಲ. ಆದರೂ ಈ ಬಗ್ಗೆ ವಿವಾದ ಹುಟ್ಟುಹಾಕಲಾಗುತ್ತಿದೆ ಎಂದರು.
ಕೆಲವು ಉತ್ಪಾದನಾ ಘಟಕಗಳನ್ನು ಹೊಂದಿರುವ ಉದ್ದಿಮೆಗಳು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ವಸ್ತುಗಳ ಉತ್ಪಾದನೆ ಮಾಡುವ ಸಲುವಾಗಿ ಕೆಲಸದ ವೇಳೆ ಹೆಚ್ಚಳ ಮಾಡುವಂತೆ ಕೋರಿವೆ. ಈ ಬಗ್ಗೆ ಸರ್ಕಾರದಲ್ಲಿ ಇನ್ನು ಪರಿಶೀಲನೆಯಲ್ಲಿದೆ. ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.