ಬೆಂಗಳೂರು: ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ವೇತನ, ಇಎಸ್‌ಐ ಮತ್ತು ಪಿಎಫ್‌ನಲ್ಲಾಗುವ ತೊಂದರೆ ತಪ್ಪಿಸಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾಯಕೊಂಡ ಶಾಸಕರಾದ ಬಸವಂತಪ್ಪ ಕೆ.ಎಸ್ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೊಸೈಟಿ ಮಾಡಿ ಅಲ್ಲಿಂದ ಔಟ್ ಸೋರ್ಸ್ ಮಾಡಬೇಕು. ಔಟ್ ಸೋರ್ಸ್ ಏಜೆನ್ಸಿಗಳಿಗೆ ಕಡಿವಾಣ ಹಾಕಲಾಗುವುದು. ಸೊಸೈಟಿ ಮಾಡಿ ಅಲ್ಲಿ ನೋಂದಣಿ ಮಾಡಬೇಕು ಎಂಬ ನಿಯಮ ಜಾರಿಯಾಗಲಿದೆ ಎಂದು ಸಚಿವ ಲಾಡ್ ಹೇಳಿದರು.
ಔಟ್‌ಸೋರ್ಸ್ ಏಜೆನ್ಸಿಗಳು ಕಡಿಮೆ ವೇತನ ನೀಡಿ ನೌಕರರನ್ನು ಶೋಷಣೆ ಮಾಡುತ್ತಿವೆ ಎಂಬ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾಮಾನ್ಯವಾಗಿ ಪಿಎಫ್, ಇಎಸ್‌ಐ ಅನ್ನು ಗುತ್ತಿಗೆದಾರ ಕೊಡಲೇಬೇಕು ಎಂಬ ಕಾನೂನು ಇದೆ. ಕಾರ್ಮಿಕರ ಎಟಿಎಂ ಕಾರ್ಡ್ ಮತ್ತು ಪಾಸ್‌ಬುಕ್ ಅನ್ನು ಗುತ್ತಿಗೆದಾರರೇ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ನಿಖರವಾದ ದೂರು ಇದ್ದರೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಕಾರ್ಮಿಕರಿಗೆ ತಿಂಗಳು ವೇತನ ಕೊಡಲ್ಲ ಎಂಬ ದೂರುಗಳಿವೆ. ಇಎಸ್‌ಐ ತುಂಬದವರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.