ಬೆಂಗಳೂರು: ಹುಬ್ಬಳ್ಳಿ ಪೊಲಿಸ್ ಠಾಣೆ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ಹೈಕೋರ್ಟ್ ಪೀಠ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ತೀರ್ಪು ನೀಡಿದೆ. ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ಹಿಂಪಡೆದಿತ್ತು. ಆ ಕ್ರಮ ಸರಿಯಲ್ಲ ಎಂದು ಆದೇಶ ಮಾಡಿದೆ. ನಾನು ಹಿಂದೆ ಹೇಳಿದ್ದೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವ ಪ್ರಕರಣ ವಾಪಸ್ ಪಡೆಯುವುದು ಸರಿಯಲ್ಲ. ಆದರೂ ರಾಜಕೀಯ ಒತ್ತಡಕ್ಕೆ, ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದಿದ್ದರು. ನ್ಯಾಯಾಲಯ ಸರಿಯಾದ ಛೀಮಾರಿ ಹಾಕಿದೆ. ರಾಜ್ಯದ ಸಚಿವ ಸಂಪುಟ, ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು. ಒಲೈಕೆ ರಾಜಕಾರಣ ಮಾಡಬಾರಬಾರದು. ಇನ್ನಾದರೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಕಮಲ್ ಹಾಸನ್ ಕ್ಷಮೆ ಕೇಳಲಿ: ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಗೆ ಅಪಮಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
ಕನ್ನಡ ಬಹಳ ಹಳೆಯ ಪ್ರಾಚೀನ ಭಾಷೆ. ಭಾಷೆಯ ಪ್ರಾಚೀನತೆ ಹಲವಾರು ವಿಧಾನದಲ್ಲಿ ಇರಲಿದೆ. ಕಮಲ್ ಹಾಸನ್ ದೊಡ್ಡ ಪರಿಣಿತ ಅಲ್ಲ. ಭಾಷೆಯ ಮೇಲೆ ಮಾತನಾಡುವಾಗ ಹಿಡಿತ ಇರಬೇಕು. ಅವರು ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳಬೇಕಾದರೆ ಕ್ಷಮಾಪಣೆ ಕೇಳಬೇಕು ಎಂದು ಹೇಳಿದರು.