ಹಳ್ಳಿ ಹುಡುಗನಿಗೆ ಐಎಎಸ್ ಕನಸು ಬಿತ್ತಿದ ‘ಕೋವಿಡ್’

ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಮನೋರೋಗ ತಜ್ಞ: ಕನ್ನಡ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ತೇರ್ಗಡೆಗೊಂಡ ಅಪ್ಪಟ ಹಳ್ಳಿ ಪ್ರತಿಭೆ

ನಿಂಗಪ್ಪ ಎ.ಎನ್.

ದಾವಣಗೆರೆ: ‘ಇಡೀ ಜಗತ್ತನ್ನೇ ನಡುಗಿಸಿದ್ದ, ತಲ್ಲಣಗೊಳಿಸಿದ್ದ ‘ಕೋವಿಡ್’ ಅಸಂಖ್ಯಾತ ಜನರ ಸಾವಿಗೆ ಕಾರಣವಾದರೆ, ಒಬ್ಬ ವ್ಯಕ್ತಿಗೆ ಪ್ರೇರಣೆ ನೀಡಿದೆ’ ಎಂದರೆ ಯಾರು ನಂಬುವುದಿಲ್ಲ.!
ಹೌದು, ನಂಬಲೇಬೇಕು, ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾದೇನಹಳ್ಳಿ ಗ್ರಾಮದ ಮನೋರೋಗ ತಜ್ಞ ಡಾ.ದಯಾನಂದ್ ಸಾಗರ್ ಅವರಿಗೆ ‘ಕೋವಿಡ್’ ಐಎಎಸ್ ಪರೀಕ್ಷೆ ಬರೆಯಲು ಪ್ರೇರಣೆ ನೀಡಿದೆ. 
೨೦೨೪ರ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ೬೧೫ನೇ ರ‍್ಯಾಂಗ್ ಪಡೆದಿರುವ ಮನೋರೋಗ ತಜ್ಞ ಡಾ.ದಯಾನಂದ್ ಸಾಗರ್, ಕನ್ನಡ ಐಚ್ಛಿಕ ವಿಷಯದಲ್ಲಿ ಎರಡನೇ ಬಾರಿ ಪ್ರಯತ್ನದಲ್ಲೇ ಯಶಸ್ವಿಯಾಗಿ ಪಾಸ್ ಮಾಡಿದ ಹಿರಿಮೆ ಇವರಿಗಿದೆ.
ತಂದೆ ಲಕ್ಷ್ಮಣನಾಯ್ಕ್, ತಾಯಿ ಮಂಜುಳಾಬಾಯಿ ದಂಪತಿಯ ಪುತ್ರನಾದ ಡಾ.ದಯಾನಂದ್ ಸಾಗರ್, ಪ್ರಾಥಮಿಕ ಶಿಕ್ಷಣವನ್ನು ಚನ್ನಗಿರಿಯಲ್ಲಿ ಪಡೆದಿದ್ದಾರೆ. ನಂತರ ಶಿವಮೊಗ್ಗದಲ್ಲಿ ಪಿಯುಸಿ ಮುಗಿಸಿದ್ದಾರೆ. ಮನೋಶಾಸ್ತçದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಸಾಗರ್, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ನಂತರ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡಿದ್ದಾರೆ. ಪ್ರಸ್ತುತ ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐಎಎಸ್ ಪರೀಕ್ಷೆಗೆ ಸ್ಫೂರ್ತಿ ನೀಡಿದ ಕೋವಿಡ್: ಕೋವಿಡ್ ಸಂದರ್ಭದಲ್ಲಿ ವೈದ್ಯರ ಪ್ರತಿನಿಧಿಯಾಗಿ ಜನರ ಸೇವೆ ಮಾಡಿದೆ. ಕರ್ನಾಟಕ ವೈದ್ಯರ ಅಸೋಸಿಯೇಷನ್ ಸಂಘದ ರಾಜ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳ ಓಡನಾಟ ನಾನು ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಹೆಚ್ಚಿನ ಸ್ಫೂರ್ತಿ ನೀಡಿತು ಎಂದು ಡಾ.ದಯಾನಂದ್ ಸಾಗರ್ ಸಂಯುಕ್ತ ಕರ್ನಾಟಕದೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಯಾವುದೇ ಕೋಚಿಂಗ್ ಇಲ್ಲದೇ ನಾನು ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಎರಡನೇ ಪ್ರಯತ್ನದಲ್ಲಿ ೬೧೫ ರ‍್ಯಾಂಕ್ ಪಡೆದುಕೊಂಡಿದ್ದೇನೆ. ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರಬೇಕೆಂಬ ಉತ್ಸಾಹ ನನ್ನಲ್ಲಿ ಸದಾ ತುಡಿತಾ ಇತ್ತು. ಇದು ಕೂಡ ನಾನು ಐಎಎಸ್ ಪರೀಕ್ಷೆ ತೆಗೆದುಕೊಳ್ಳಲು ಕಾರಣವಾಯಿತು.
-ಡಾ.ದಯಾನಂದ್ ಸಾಗರ್, ೬೧೫ನೇ ರ‍್ಯಾಂಕ್ ಪಡೆದ ವೈದ್ಯರು.