ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುಮಲತಾ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಇತರರು ಉಪಸ್ಥಿತಿಯ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಸೇರ್ಪಡೆಗೊಂಡರು, ಬಳಿಕ ಮಾತನಾಡಿದ ಅವರು ಇಂದಿನ ದಿನವು ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದಿರುವ ಸುದಿನವಾಗಿದೆ. ಐದು ವರ್ಷಗಳ ಹಿಂದೆ ಮಂಡ್ಯ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ, ಆ ಸಂದರ್ಭವನ್ನು ಎಂದಿಗೂ ಮರೆಯುವುದಿಲ್ಲ. ಮಂಡ್ಯದ ಜನತೆ, ಅಂಬರೀಶ್ ಅಭಿಮಾನಿಗಳ ಬಳಗವು ನನಗೆ ಬೆನ್ನೆಲುಬಾಗಿ ನಿಂತಿದೆ. 5 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನನಗೆ ಬೆಂಬಲ ನೀಡಿದ್ದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ. ಈಗ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ. ಮುಂದಿನ ದಿನಗಳಲ್ಲೂ ಜನರ ಬೆಂಬಲ ಹೀಗೆಯೇ ಇರಲಿ” ಎಂದು ಹೇಳಿದರು.
ಇಂದಿನಿಂದ ಹೊಸ ಅಧ್ಯಾಯ : ಅದಕ್ಕೂ ಮುಂಚೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೋ ಒಂದು ಒಳ್ಳೆಯ ಕಾರ್ಯ ಮಾಡುವಾಗ ಅವರ ಆಶೀರ್ವಾದ ಪಡೆದೆ ಮುಂದುವರಿಯುತ್ತೆನೆ. ಖಂಡಿತ ಇದಕ್ಕೆ ಅವರ ಆಶೀರ್ವಾದ ಇರುತ್ತೆ ಎಂದು ಅಂದುಕೊಂಡಿದ್ದೇನೆ ಎಂದರು.
28 ಕ್ಷೇತ್ರಗಳಲ್ಲಿ ಕೂಡ ಗೆಲ್ಲಬೇಕು: ಚುನಾವಣೆ ದಿನಾಂಕ ಯಾವ ರೀತಿ ಎಲ್ಲೆಲ್ಲಿ ಪ್ರಚಾರ ಮಾಡುವುದರ ಕುರಿತು ಪ್ಲಾನ್ ಮಾಡಿ ಚರ್ಚೆಯ ನಂತರ ಪ್ರಯಾಣ ಮಾಡುವದಾಗಿ ತಿಳಿಸಿದ ಅವರು, ಮಂಡ್ಯ ಪ್ರಚಾರ ಕುರಿತಂತೆ ಎನ್‌ಡಿಎ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಂದಮೇಲೆ ಮಂಡ್ಯ ಮಾತ್ರ ಅಲ್ಲ ಅವರು ಎಲ್ಲೆಲ್ಲಿ ನನಗೆ ಹೋಗಬೇಕು ಅಂತ ಹೇಳುತ್ತಾರೆ ಅಲ್ಲಿ ಹೋಗುವಂತಹ ಅವಶ್ಯಕತೆ ಇರುತ್ತೆ. ಅದು ನನ್ನ ಕರ್ತವ್ಯ ಕೂಡ ಆಗಿದೆ ಹೀಗಾಗಿ ಮಂಡ್ಯ ಚುನಾವಣೆ ಅಂತ ಅಲ್ಲ ಎಲ್ಲಾ ಕಡೆಗೂ 28 ಕ್ಷೇತ್ರಗಳಲ್ಲಿ ಕೂಡ ಗೆಲ್ಲಬೇಕು ಅಂತ ಗುರಿ ಇಟ್ಟುಕೊಲಾಗಿದೆ ಎಂದರು.