ಸಾಹಿತಿ, ಚಿಂತಕ ನಾಡೋಜ ಡಾ. ಜಿ. ಕೃಷ್ಣಪ್ಪ ನಿಧನ

ಬೆಂಗಳೂರು: ನಾಡೋಜ ಡಾ. ಜಿ. ಕೃಷ್ಣಪ್ಪ (೭೭) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

‘ಬೇಂದ್ರೆ ಕೃಷ್ಣಪ್ಪ’ ಎಂದೇ ಹೆಸರಾಗಿದ್ದ ಬೆಂಗಳೂರು ಸಮೀಪದ ಚೋಳನಾಯಕನಹಳ್ಳಿಯ ಕೃಷ್ಣಪ್ಪ ಜಿ. ಅವರು ಸಾಹಿತ್ಯಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದುದು.

ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗೃಹ ನಂ. 26, ಶ್ರೀನಿಕೇತನ ಲೇಔಟ್, ಅಬ್ಬಿಗೆರೆ ಹತ್ತಿರ, ಬೆಂಗಳೂರು ಇಲ್ಲಿ ಇರಿಸಲಾಗುವುದು. ಅಂತ್ಯಸಂಸ್ಕಾರವನ್ನು ಸಂಜೆ 4 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಾಚೀನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಕೆಲವು ಕೃತಿಗಳನ್ನು ಓದುಗರಿಗೆ ಸರಳವಾಗಿ ಪರಿಚಯಿಸಿದವರು. ಬೇಂದ್ರೆ ಸಾಹಿತ್ಯದ ಮೇಲೆ ಸಂಶೋಧನೆ ಮಾಡಿ ಕವಿಯ ಸಾಕಷ್ಟು ಕವಿತೆಗಳ ಕುರಿತ ವಿಮರ್ಶೆಗಳೊಂದಿಗೆ ಕೆಲವು ಕೃತಿಗಳನ್ನು ಪ್ರಕಟಿಸಿದ್ದರು.

೧೯೮೮ರಿಂದ ನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ ‘ದ.ರಾ. ಬೇಂದ್ರೆ ಕವನ ಗಾಯನ ಸ್ಪರ್ಧೆ’ ಏರ್ಪಡಿಸಿ ದ.ರಾ ಬೇಂದ್ರೆ ಅವರ ಕೃತಿಗಳನ್ನು ಬಹುಮಾನದ ರೂಪದಲ್ಲಿ ನೀಡುತ್ತಿದ್ದರು. ಪ್ರತಿವರ್ಷ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ಕುರಿತು ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆ ನಡೆಸಿ, ಬಹುಮಾನ ನೀಡುತ್ತಿದ್ದರು. ೨೦೦೭ರಲ್ಲಿ ಬೆಂಗಳೂರಿನಲ್ಲಿ ‘ದ.ರಾ ಬೇಂದ್ರೆ ಕಾವ್ಯ ಕೂಟ’ ಸ್ಥಾಪನೆ ಮಾಡಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ೩೧ನೇ ಘಟಿಕೋತ್ಸವದಲ್ಲಿ ನಾಡೋಜ ಗೌರವ ಪದವಿಯನ್ನು ನೀಡಿತ್ತು. ಕೆಂಪೇಗೌಡ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ , ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಸೇರಿದಂತೆ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.