ಹುಬ್ಬಳ್ಳಿ: ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ತುಷ್ಠೀಕರಣದ ಪರಮಾವಧಿಯನ್ನು ಮೆರೆಯುತ್ತಿದೆ. ಸರ್ಕಾರ ಹೇಗೆ ಇರಬಾರದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಕಿಡಿಕಾರಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇಟ್ಟಿರುವ ಹೆಜ್ಜೆಯನ್ನು ಹಿಂಪಡೆಯಬೇಕು. ಈ ಕೂಡಲೇ ರೈತರಿಗೆ ನೀಡಿರುವ ನೋಟಿಸ್‌ನ್ನು ವಾಪಸ್ ಪಡೆಯಬೇಕು. ಸಂಬಂಧಪಟ್ಟ ರೈತರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ನಮ್ಮ ಕಾಲದಲ್ಲಿ ಒಂದೋ ಎರಡೋ ಪ್ರಕರಣಗಳು ಆಗಿರಬಹುದು. ಅದನ್ನು ಸ್ಥಳಿಯ ಅಧಿಕಾರಿಗಳನ್ನು ಕೇಳಬೇಕು ಎಂದರು.
ರೈತರ ಹಿತಾಸಕ್ತಿ ಕಾಪಾಡಲು, ತುಷ್ಠೀಕರಣ ನೀತಿಯನ್ನು ಬಿಜೆಪಿ ಸದಾ ಖಂಡಿಸುತ್ತದೆ. ರೈತರ ಜಮೀನು ಕಬಳಿಕೆ ವಿಚಾರವಾಗಿ ನಮ್ಮಲ್ಲಿ ಶೋಧನ ಕಮೀಟಿ ರಚಿಸಿ ವರದಿ ಸಿದ್ಧಪಡಿಸಲಾಗುವುದು. ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ತಪ್ಪು ಸಾಬೀತಾಗಿದೆ. ಇಡಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕುಟುಂಬಸ್ಥರು ಮತ್ತು ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರದ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕುಸಿಯುತ್ತದೆ ಎಂದು ಎಚ್ಚರಿಸಿದರು.
                
























