ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಜ.8 ಬುಧವಾರದಂದು ಬಸ್ ನಿರ್ವಾಹಕನ ಕಾರ್ಯಕ್ಕೆ ಅಡ್ಡಿಪಡಿಸಿದ ಮೂವರಿಂದ ಹಲ್ಲೆ ನಡೆಸಿದ ಪರಿಣಾಮ ಬನಹಟ್ಟಿ ಪೊಲೀಸರು ಗುರುವಾರ ರಾತ್ರಿ ಓರ್ವನನ್ನು ಬಂಧಿಸಿದ್ದು, ಮತ್ತಿಬ್ಬರ ಬಂಧನಕ್ಕೆ ಜಾಲ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ ಮಠಪತಿ ಎಂಬಾತನನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಾದ ವಿರೇಶ ಮಠಪತಿ, ಶ್ರೀಶೈಲ ಮಠಪತಿ ಎಂಬುವರನ್ನು ಶೀಘ್ರ ಬಂಧಿಸಿ ವಿಚಾರಣೆ ನಡೆಸಲಾಗುವದೆಂದು ಪೊಲೀಸ್ ಮೂಲಗಳು ತಿಳಿಸಿದ್ದು, ಈ ಕುರಿತು ಫಿರ‍್ಯಾಧಿ ಬಸ್ ನಿರ್ವಾಹಕ ಸದಾಶಿವ ಬಂಡಿನವರಿಂದ ಮೂವರು ಆರೋಪಿಗಳ ವಿರುದ್ಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
ನಡೆದಿದ್ದೇನು: ಕಳೆದ ದಿ.8 ರಂದು ಸಂಜೆ 5 ಗಂಟೆ ಸುಮಾರಿಗೆ ದೈನಂದಿನವಾಗಿ ಹೊರಡುತ್ತಿದ್ದ ವಿಜಯಪುರ-ಹುಕ್ಕೇರಿ ಬಸ್ ಬನಹಟ್ಟಿ ಬಸ್ ನಿಲ್ದಾಣದಿಂದ ಹೊರಟಿದೆ. ಭರ್ತಿ ತುಂಬಿದ ಬಸ್ ಚಲಿಸುವ ಸಂದರ್ಭ ವಿದ್ಯಾರ್ಥಿಯೋರ್ವ ಹತ್ತುವಾಗ ನಿರ್ವಾಹಕ ಬಸ್ ನಿಲ್ಲಿಸಿಲ್ಲ. ಓಡಿ ಬಂದು ಚಲಿಸುವ ಬಸ್ ಹತ್ತಿ, ಬಸ್ ನಿಲ್ಲಿಸಲು ಆಗುವದಿಲ್ಲವೇ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಆ ಕಡೆ ನಿರ್ವಾಹಕನೂ ಮಾತಿಗೆ ಮಾತು ಬೆಳೆದ ನಂತರ ವಿದ್ಯಾರ್ಥಿಯು ಮೊಬೈಲ್ ಮೂಲಕ ಮನೆಯವರನ್ನು ಚಿಮ್ಮಡ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಾನೆ.ಬಸ್ ಚಿಮ್ಮಡ ಬಸ್ ನಿಲ್ದಾಣಕ್ಕೆ ಬರುವದಷ್ಟೇ ತಡ ಮೂವರು ಆರೋಪಿಗಳಿಂದ ನಿರ್ವಾಹಕನನ್ನು ಬಸ್‌ನಿಂದ ಕೆಳಗಿಳಿಸಿ ಹಿಗ್ಗಾ-ಮುಗ್ಗಾ ಥಳಿಸಿ ತೀವ್ರ ಗಾಯಗೊಳಿಸಿದ್ದಾರೆ. ನಂತರ ನಿರ್ವಾಹಕನಿಂದ ಪೊಲೀಸರಿಗೆ ದೂರು ನೀಡಿದ್ದಾನೆ.
























