ವಿವಾದಿತ ಪಠ್ಯ ಹಿಂಪಡೆಯಲು ಕವಿವಿ ಆವರಣದಲ್ಲಿ ಪ್ರತಿಭಟನೆ

0
20

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್ ಕನ್ನಡ ಭಾಷೆಯ “ಬೆಳಗು’ ಪುಸ್ತಕದಲ್ಲಿರುವ ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿ ಮತ್ತು ಸಮಾಜವನ್ನು ವಿಘಟಿಸುವ ರೀತಿಯಲ್ಲಿರುವ ಲೇಖನವನ್ನು ಪಠ್ಯದಿಂದ ಕೈಬಿಡುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶುಕ್ರವಾರ ಕವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಅತ್ಯಂತ ಹಳೆಯ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಹೊಂದಿರುವ ಕವಿವಿ, ರಾಜ್ಯಕ್ಕೆ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅನೇಕ ಕೊಡುಗೆಗಳನ್ನು ನೀಡಿದೆ. ಇಂಥ ಹಿರಿಮೆ ಹೊಂದಿರುವ ಕವಿವಿ ತನ್ನ ಪಠ್ಯ ಪುಸ್ತಕದಲ್ಲಿ ಭಾರತೀಯತೆ, ಸಂವಿಧಾನ, ದೇಶಪ್ರೇಮಕ್ಕೆ ಧಕ್ಕೆ ತರುವಂತಹ ಲೇಖನವನ್ನು ಸೇರಿಸಿರುವುದು ವಿದ್ಯಾರ್ಥಿಗಳಲ್ಲಿ ಭಾರತೀಯತೆ ಮತ್ತು ಸಂವಿಧಾನದ ಮೇಲೆ ಅಗೌರವ ಭಾವನೆ ಉಂಟು ಮಾಡುವುದು ಕವಿವಿ ಕನ್ನಡ ಅಭ್ಯಾಸ ಮಂಡಳಿಯ ಉದ್ದೇಶ ಎಂಬAತಾಗಿದೆ. ಕೂಡಲೇ ಈ ಲೇಖನವನ್ನು ಪಠ್ಯದಿಂದ ಕೈಬಿಡಬೇಕು.ಕನ್ನಡ ಅಭ್ಯಾಸ ಮಂಡಳಿಯ ಅಧ್ಯಕ್ಷ ಪ್ರೊ.ಕೃಷ್ಣಾ ನಾಯಕ ಅವರನ್ನು ಜವಾಬ್ದಾರಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಲಾಯಿತು.
ಮೊದಲ ಸೆಮೆಸ್ಟರ್ ಪರೀಕ್ಷೆಯಲ್ಲಿ ಲೇಖನವನ್ನು ಕೈಬಿಡಬೇಕು. ಕೂಡಲೇ ವಿಶ್ವವಿದ್ಯಾಲಯ ಪಠ್ಯ ಪರಿಷ್ಕರಣೆಗೆ ಆದೇಶಿಸಬೇಕು. ಕನ್ನಡ ಅಭ್ಯಾಸ ಮಂಡಳಿಯ ಅಧ್ಯಕ್ಷ ಪ್ರೊ. ಕೃಷ್ಣ ನಾಯಕ ಅವರನ್ನು ಕೂಡಲೇ ಜವಾಬ್ದಾರಿಯಿಂದ ವಜಾಗೊಳಿಸಬೇಕು. ಸಂಪಾದಕರು ಹಾಗೂ ಲೇಖಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪಠ್ಯ ರಚನೆಯಲ್ಲಿರುವ ಅಧ್ಯಾಪಕರನ್ನು ಅಮಾನತಿನಲ್ಲಿಟ್ಟು ವಿಶ್ವವಿದ್ಯಾಲಯ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬೆಳಗು ಪಠ್ಯಪುಸ್ತಕದಲ್ಲಿ ಸಂವಿಧಾನ ವಿರೋಧಿ ಲೇಖನ ಸೇರಿಸಿದ್ದರಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ಕೂಡಲೇ ಸರಕಾರ ಲೇಖನದ ಲೇಖಕರು, ಪುಸ್ತಕದ ಸಂಪಾದಕರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕವಿವಿಯಿಂದ ದೊಡ್ಡ ಅವಾಂತರವಾಗಿದೆ. ದೇಶ ವಿರೋಧಿ ಲೇಖನ ಪಠ್ಯದಲ್ಲಿ ಸೇರಿಸಿ ಪ್ರಮಾದ ಮಾಡಿದೆ. ಲೇಖನವು ವಿದ್ಯಾರ್ಥಿಗಳ ದಾರಿ ತಪ್ಪಿಸುವ ಉದ್ದೇಶ ಹೊಂದಿದೆ. ಪಠ್ಯದಲ್ಲಿ ಸೋನಿಯಾ ಗಾಂಧಿಪ್ರಧಾನಿಯಾಗಬೇಕಿತ್ತು ಎಂದು ಬರೆಯಲಾಗಿದೆ. ಸಂವಿಧಾನ ವಿರೋಧಿ ಪಠ್ಯವನ್ನು ಕೈಬಿಡುವ ಕುರಿತು ಕುಲಪತಿಗಳು ಭರವಸೆ ನೀಡಿದ್ದಾರೆ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಠ್ಯಪುಸ್ತಕಲ್ಲಿ ವಿವಾದಾತ್ಮಕ ಲೇಖನ ಪ್ರಕಟಗೊಂಡ ಕುರಿತು ಉನ್ನತ ಶಿಕ್ಷಣ ಸಚಿವ ಸುಧಾಕರ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಮೊದಲು ಅವರು ಲೇಖನವನ್ನು ಓದಬೇಕು. ಲೇಖನ ಓದಿದವರ ರಕ್ತ ಕುದಿಯುತ್ತದೆ. ರಕ್ತ ಕುದಿಯದಿದ್ದರೆ ಅವರು ಭಾರತೀಯರೇ ಅಲ್ಲ ಎಂದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಜ್ಯೋತಿ ಪಾಟೀಲ, ಶಂಕರ ಶೇಳಕೆ, ಚಂದ್ರಶೇಖರ ಮನಗುಂಡಿ, ಮಂಜುನಾಥ ಬಟ್ಟೆಣ್ಣವರ,
ವಿಷ್ಣು ಕೊರ್ಲಹಳ್ಳಿ, ಮುಖಂಡರಾದ ಸಂಜಯ ಕಪಟಕರ, ಈರಣ್ಣ ಹಪ್ಪಳಿ, ಪ್ರಮೋದ ಕಾರಕೂನ, ಮೋಹನ ರಾಮದುರ್ಗ, ಮಂಜುನಾಥ ನೀರಲಕಟ್ಟಿ, ಶಂಕರ ಕೊಟ್ರಿ, ಎಬಿವಿಪಿಯ ಅರುಣ ಅಮರಗೋಳ, ಮಣಿಕಂಠ ಕಳಸ, ವಿಜಯ ಕಲ್ಲೂರ, ಸೋಹನ ಮಲ್ಲಾಡದ, ನಾಗರತ್ನ, ತೃಪ್ತಿ,ಪೂನಂ , ವಿಜಯಲಕ್ಷ್ಮಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Previous articleಶಿರಡಿ ಸಾಯಿ ದರ್ಶನ ಪಡೆದ ಪವಿತ್ರಾ
Next articleಲಾಂಗು, ಮಚ್ಚು ಹಿಡಿದು ದರೋಡೆಗಿಳಿದ ಯೋಧ: ಬೆಚ್ಚಿ ಬಿದ್ದ ಜನತೆ