ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್ ಬೆಳಕು' ಕನ್ನಡ ಪಠ್ಯದ ಸುತ್ತ ಈಗ ವಿವಾದ ಭುಗಿಲೆದ್ದಿದೆ. ಪುಸ್ತಕದಲ್ಲಿ ರಾಷ್ಟ್ರ ವಿರೋಧಿ, ಸಮಾಜ ವಿರೋಧಿ, ಸಂವಿಧಾನ ವಿರೋಧಿ ಅಂಶಗಳಿದ್ದು, ಪಠ್ಯವನ್ನು ಕೂಡಲೇ ಹಿಂಪಡೆದು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಂಘ ಪರಿವಾರದ ಶಿಕ್ಷಣ ಸಂಘಟನೆಗಳು ಹೋರಾಟಕ್ಕೆ ಅಣಿಯಾಗಿವೆ. ಬೆಳಕು’ ಪಠ್ಯದಲ್ಲಿ ರಾಮಲಿಂಗಪ್ಪ ಬೇಗೂರ ಬರೆದ “ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಲೇಖನದಲ್ಲಿ ಭಾರತಮಾತೆಯ ಚಿತ್ರ ಹಿಂದೂಮಾತೆಯ ಚಿತ್ರವಾಗಿದೆ. ಭಾರತ ಮಾತಾ ಕೀ ಜೈ ಎನ್ನುವುದು ಮತ್ತೊಬ್ಬರ ಸೋಲನ್ನು ಬಿಂಬಿಸುತ್ತದೆ. ರಾಮಜನ್ಮಭೂಮಿ-ಬಾಬ್ರಿ ಮಸೀದಿ ಅಗೆಯುತ್ತ ಹೋದರೆ ಇದು ಯಾರಿಗೆ ಸೇರಿದ್ದೆಂಬುದನ್ನು ಶೋಧಿಸುವುದು ಕಷ್ಟಸಾಧ್ಯ ಎಂದು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಇದು ಪಠ್ಯದಂತಿಲ್ಲ ರಾಜಕೀಯ ಲೇಖನದಂತಿದೆ ಸಂಘ ಪರಿವಾರದವರು ಟೀಕಿಸಿದ್ದಾರೆ.
ಪ್ರತಿಷ್ಠೆಗಾಗಿ ಚಂದ್ರಯಾನಕ್ಕೆ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಲಾಭವಾಗಿಲ್ಲ. ರಾಷ್ಟ್ರೀಯತೆಯ ಪಿತ್ತ ನೆತ್ತಿಗೇರಿದರೆ ಅಣುಬಾಂಬ್ ತಯಾರಿಸಲಾಗುತ್ತದೆ ಎಂದೆಲ್ಲ ಬರೆದಿರುವುದು ವಿವಾದ ಸೃಷ್ಟಿಸಿದೆ. “ರಾಷ್ಟ್ರೀಯತೆ’ ಶೀರ್ಷಿಕೆಯಡಿ ರವೀಂದ್ರನಾಥ ಠಾಗೋರ್, ದೇವನೂರ ಮಹಾದೇವ, ರಘುನಾಥ ಚ.ಹ., ರಾಮಲಿಂಗಪ್ಪ ಬೇಗೂರ ಅವರ ಲೇಖನಗಳಿವೆ.
ಈ ಪಠ್ಯಪುಸ್ತಕದಲ್ಲಿ ವಿವಾದಾತ್ಮಕ ವಿಷಯಗಳಿರುವುದು ನನಗೆ ಮಾಹಿತಿ ಇರಲಿಲ್ಲ. ಈ ಕುರಿತು ತಜ್ಞರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ. ಎಸ್. ಜಯಶ್ರೀ ಸ್ಪಷ್ಟನೆ ನೀಡಿದ್ದಾರೆ.
























