ಹಾವೇರಿ: ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸವಣೂರು ತಾಲೂಕಿನ ಹುರುಳಿಕುಪ್ಪಿಯಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಡಾ ವಿಚಾರವಾಗಿ ಲೋಕಾಯುಕ್ತ ಪೊಲೀಸರು ನೀಡಿರುವ ನೋಟಿಸ್ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ʻವಿಚಾರಣೆಗೆ ಹೋಗುತ್ತೇನೆ’ ಎಂದಷ್ಟೇ ಹೇಳಿ ಮುಂದೆ ಸಾಗಿದ್ದಾರೆ.
ನ. 6ರಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿದ್ದರಾಮಯ್ಯನವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಪತ್ನಿ ಎ೨ ಪಾರ್ವತಿ, ಅವರ ಸಹೋದರ ಎ೩ ಮಲ್ಲಿಕಾರ್ಜುನ ಮತ್ತು ಜಮೀನಿನ ಮಾಲೀಕ ಎ೪ ದೇವರಾಜು ವಿಚಾರಣೆಯನ್ನು ನಡೆಸಿದ್ದಾರೆ.
40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯನವರು ಮೊದಲ ಬಾರಿಗೆ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸಬೇಕಾಗಿ ಬಂದಿದೆ.