ರೈಲ್ವೆ ಭೂಮಿ ಉಳಿವಿಗೆ ಹೋರಾಟ ಆರಂಭ

0
17

ಹುಬ್ಬಳ್ಳಿ: ನಗರದ ಎಂಟಿಎಸ್ ಕಾಲೋನಿಯಲ್ಲಿರುವ ನೈಋತ್ಯ ರೈಲ್ವೆ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಹು-ಧಾ ಮಹಾನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಾರವಾರ ರಸ್ತೆ ಕಾಂಗ್ರೆಸ್ ಕಚೇರಿಯಿಂದ ಎಂಟಿಎಸ್ ಕಾಲೋನಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಬಿಜೆಪಿ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ. ರೈಲ್ವೆ ಮಾಲು… ಜೋಶಿ ಗೋಲ್ಮಾಲ್ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾವಚಿತ್ರವುಳ್ಳ ಪ್ರತಿಕೃತಿ ದಹಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಹು-ಧಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ ಮಾತನಾಡಿ, ರೈಲ್ವೆ ಜಾಗವನ್ನು ಕಬಳಿಸುವ ಬಹು ದೊಡ್ಡ ಷಡ್ಯಂತ್ರ ನಡೆದಿದೆ. ನೂರಾರು ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ರೈಲ್ವೆ ಇಲಾಖೆ ಲೀಸ್ ನೀಡುತ್ತಿದೆ. ತಮಗೆ ಬೇಕಾದವರಿಗೆ ಭೂಮಿಯನ್ನು ಕೊಡಿಸುವ ಉದ್ದೇಶದಿಂದ ಬಿಜೆಪಿಯ ಮಾಸ್ಟರ್ ಪ್ಲಾನ್‌ಗೆ ರೈಲ್ವೆ ಇಲಾಖೆ ಬಲಿಯಾಗುತ್ತಿದೆ. ಇದೇ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬಹುದಿತ್ತು ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನಿಲ ಕುಮಾರ ಪಾಟೀಲ ಮಾತನಾಡಿ, ರೈಲ್ವೆ ಸರ್ಕಾರಿ ಆಸ್ತಿಯಾಗಿದ್ದು, ಇದನ್ನು ಯಾವುದಕ್ಕೆ ಬಳಕೆ ಮಾಡಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಈ ಜಾಗದ ಗೋಲ್ ಮಾಲ್‌ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಇದನ್ನು ತನಿಖೆಗೆ ಒಳಪಡಿಸಬೇಕು. ಯಾವುದೇ ಕಾರಣಕ್ಕೂ ನಾವು ಈ ಜಾಗ ಖಾಸಗೀಕರಣ ಮಾಡಲು ಬಿಡುವುದಿಲ್ಲ. ಹಿಂದೆ ಗ್ರೌಂಡ್ ಬಚಾವೋದಂತೆ ಈಗ ಜಾಗ ಬಚಾವೋ ಅಭಿಯಾನ ಮಾಡಲಾಗುವುದು ಎಂದರು.

Previous articleವಿವೇಕಾನಂದ ಆಸ್ಪತ್ರೆಯಲ್ಲಿ ರೇಡಿಯಾಲಜಿ ಘಟಕ ಆರಂಭ
Next articleಸ್ವಪಕ್ಷೀಯರಿಂದಲೇ ಸಂಸದ ಹೆಗಡೆ ತರಾಟೆ