ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ. ೨೮ಕ್ಕೆ ಮುಂದೂಡಿ ಆದೇಶ ಮಾಡಿದೆ.
ಜಾಮೀನು ಅರ್ಜಿ ಕುರಿತು ಹೈಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆಯಿತು. ದರ್ಶನ್ ಕೊಲೆ ಮಾಡಿಲ್ಲ, ರೇಣುಕಾಸ್ವಾಮಿಯ ಅಪಹರಣವೇ ಆಗಿಲ್ಲ ಎಂದು ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರು. ಅಲ್ಲದೆ ದರ್ಶನ್ ಅನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.
ರೇಣುಕಾ ಸ್ವಾಮಿಯೇ ಬಾರ್‌ನಲ್ಲಿ ಬಿಲ್ ಕಟ್ಟಿದ್ದಾನೆ. ಅಪಹರಣಕ್ಕೆ ಒಳಗಾದ ವ್ಯಕ್ತಿ ಅಪಹರಣ ಮಾಡಿದವರಿಗೆ ಮದ್ಯ ಕೊಡಿಸುತ್ತಾನೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ದರ್ಶನ್ ಹಾಗೂ ಇತರರಿಗೆ ರೇಣುಕಾಸ್ವಾಮಿಯ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ವಾದ ಮಂಡಿಸಿದರು. ಆ ಬಳಿಕ ಸಂಜೆ ನಾಲ್ಕು ಗಂಟೆಗೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಮತ್ತೆ ವಾದ ಆರಂಭಿಸಿದ ದರ್ಶನ್ ಪರ ವಕೀಲ ಸಿ.ವಿ ನಾಗೇಶ್, ದರ್ಶನ್‌ರಿಂದ ವಶಪಡಿಸಿಕೊಂಡ ಶೂ, ಬಟ್ಟೆಗಳ ಮೇಲೆ ರಕ್ತದ ಕಲೆ ಇತ್ತು ಎಂದು ಹೇಳಲಾಗಿದೆ. ಆದರೆ ದರ್ಶನ್ ಬಟ್ಟೆಗಳನ್ನು ಜೂನ್ ೧೦ರಂದೇ ಸೋಪುಗಳನ್ನು ಹಾಕಿ ಒಗೆಯಲಾಗಿತ್ತು, ಹೀಗೆ ಒಗೆದ ಮೇಲೆ ರಕ್ತ ಹೇಗೆ ಬರಲು ಸಾಧ್ಯ? ಶೂ ವಶಪಡಿಸಿಕೊಂಡಾಗ ಅದರ ಮೇಲೆ ರಕ್ತದ ಕಲೆ ಇದ್ದ ಬಗ್ಗೆ ಏನೂ ದಾಖಲಾಗಿಲ್ಲ.
ಆದರೆ, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ರಕ್ತದ ಕಲೆ ಇದೆ ಎನ್ನಲಾಗಿದೆ. ಆದರೆ ಮೃತ ರೇಣುಕಾಸ್ವಾಮಿಯ ದೇಹದಿಂದ ತೆಗೆದುಕೊಂಡ ಒಂದು ಬಾಟಲಿ ರಕ್ತವನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು. ಅಲ್ಲಿ, ರಕ್ತವನ್ನು ಶೂ ಹಾಗೂ ಬಟ್ಟೆಯ ಮೇಲೆ ಹಾಕಿರುವ ಸಾಧ್ಯತೆ ಇದೆ ಎಂದ ಸಿ.ವಿ ನಾಗೇಶ್, ಪೊಲೀಸರೇ ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಕ್ಕಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ದರ್ಶನ್‌ಗೆ ಜಾಮೀನು ನಿರಾಕರಿಸಲಾಗಿತ್ತು. ಇದೀಗ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿ ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್‌ಗೆ ಆರು ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್ ಈಗಾಗಲೇ ನೀಡಿದ್ದು, ಅನಾರೋಗ್ಯದ ಕಾರಣ ನೀಡಿ ಈ ಆರು ವಾರಗಳ ಮಧ್ಯಂತರ ಜಾಮೀನನ್ನು ದರ್ಶನ್ ಪಡೆದುಕೊಂಡಿದ್ದಾರೆ ಎಂದು ವಾದ ಮಂಡಿಸಿದರು.