ಬೆಳಗಾವಿ: ಎಥನಾಲ್ ಪರಿಸರ ಸ್ನೇಹಿ ಇಂಧನವಾಗಿದ್ದು, ರಾಜ್ಯ ಸರ್ಕಾರವು ಹಸಿರು ಇಂಧನ ಉತ್ತೇಜಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಕೇಂದ್ರ ಸರ್ಕಾರ ಹಸಿರು ಇಂಧನ ಬಳಕೆಯನ್ನು ಕಡ್ಡಾಯಗೊಳಿಸುವ ಗುರಿ ಹೊಂದಿದ್ದು, ರಾಜ್ಯದಲ್ಲಿ ಸಹ ಹಂತ ಹಂತವಾಗಿ ಉತ್ಪಾದನೆ ಪ್ರಾರಂಭವಾಗಿದೆ ಎಂದು ಕೃಷಿ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ದಕ್ಷಿಣ ಭಾರತೀಯ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಘ ಮತ್ತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಹಯೋಗದಲ್ಲಿ ಲಕ್ಷ್ಮೀ ಟೆಕ್, ಗಣೇಶಪುರ ರಸ್ತೆ ಪಕ್ಕದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಜಂಟಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಕ್ಕರೆ ಉದ್ಯಮ ಮತ್ತು ಕೋ-ಆಪ್‌ರೇಟಿವ್ ಸಂಸ್ಥೆಗಳು ಒಟ್ಟಾಗಿ ರೈತರ ಆರ್ಥಿಕ ಸ್ವಾವಲಂಬನೆಗೆ ಹಾಗೂ ಗ್ರಾಮೀಣ ಸಮೃದ್ಧಿಗೆ ಶ್ರಮಿಸಬೇಕಿದೆ. ಇಂತಹ ಅಭಿವೃದ್ಧಿಯಿಂದ ರಾಜ್ಯದ ಕೃಷಿ ಆಧಾರಿತ ಆರ್ಥಿಕತೆ ಬೆಳೆದು ನಿಲ್ಲುತ್ತದೆ. ತಂತ್ರಜ್ಞಾನ ಅಳವಡಿಕೆಯ ಮೂಲಕ ಸಕ್ಕರೆ ಉದ್ಯಮದಲ್ಲಿ ಪರಿಸರಪಾಲನೆ ಹಾಗೂ ರೈತರ ಆದಾಯ ಹೆಚ್ಚಳ ಸಾಧ್ಯವಾಗುತ್ತದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೂ ಸಹಾಯಕವಾಗುತ್ತದೆ ಎಂದು ಹೇಳಿದರು.
ಕಬ್ಬಿನ ಬೆಲೆ ಸ್ಥಿರವಾಗಿಲ್ಲ. ರೈತರಿಗೆ ಬಾಕಿ ಹಣ ವಿತರಣೆಯಲ್ಲಿ ವಿಳಂಬ, ಹವಾಮಾನ ವೈಪರೀತ್ಯದಿಂದ ಕೃಷಿಯ ಮೇಲಿನ ಪರಿಣಾಮ ಸೇರಿದಂತೆ ಎಲ್ಲಾ ಸಮಸ್ಯೆ ಎದುರಿಸಿ ಸಕ್ಕರೆ ಕಾರ್ಖಾನೆಗಳು, ರೈತರು ಮತ್ತು ಕಾರ್ಮಿಕರು ತಮ್ಮ ಜೀವನೋಪಾಯ ಉಳಿಸಿಕೊಳ್ಳಲು ಹೋರಾಡಬೇಕಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ನುಡಿದರು.