ಬೆಂಗಳೂರು: ಹೇಮಾವತಿ ಹೋರಾಟ ಹತ್ತಿಕ್ಕಲು ಹೊರಟಿರುವ ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಹೇಮಾವತಿ ಲಿಂಕ್ ಕೆನಾಲ್ ಹೋರಾಟ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ಕರ್ನಾಟಕ ವರದಿಯನ್ನು ಹಂಚಿಕೊಂಡು ಪೋಸ್ಟ್ ಮಾಡಿ ಹೇಮಾವತಿ ಲಿಂಕ್ ಕೆನಾಲ್ ಹೋರಾಟದಲ್ಲಿ ತುಮಕೂರು ಜಿಲ್ಲೆಯ ಶಾಸಕರು, ರೈತ ಹೋರಾಟಗಾರರು, ಜನಪ್ರತಿನಿಧಿಗಳು, ಸ್ವಾಮೀಜಿಗಳ ಮೇಲೆ FIR ದಾಖಲಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಅತ್ಯಂತ ಖಂಡನೀಯವಾಗಿದ್ದು, ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ, ಹಿಟ್ಲರ್ ಮಾನಸಿಕತೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ.
ಸಿಎಂ ಸಿದ್ದರಾಮಯ್ಯನವರೇ, ಅಧಿಕಾರ ಬಹುಮತದಿಂದ ಸಿಗುತ್ತದೆ. ಆದರೆ ಸರ್ಕಾರ, ಆಡಳಿತ ನಡೆಯುವುದು ಸಹಮತದಿಂದ, ಒಮ್ಮತದಿಂದ. ಎರಡು ಬಾರಿ ಮುಖ್ಯಮಂತ್ರಿಗಳಾದರೂ ತಮಗೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ, ಎಲ್ಲರನ್ನೂ ಮನವೊಲಿಸಿ ಒಮ್ಮತ ಮೂಡಿಸುವ ಗುಣ ಬರಲೇ ಇಲ್ಲ.
ಈ ವಿಚಾರದ ಬಗ್ಗೆ ಸರ್ವ ಪಕ್ಷ ಸಭೆ ಕರೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕಿತ್ತು. ಯಾವುದೇ ಹೋರಾಟವನ್ನ ಸಂಕೋಲೆಗಳಲ್ಲಿ ಬಂಧಿಸಲು ಸಾಧ್ಯವಿಲ್ಲ, ಸೆರೆಮನೆಯಲ್ಲಿ ಸಮಾಧಿ ಮಾಡಲು ಸಾಧ್ಯವಿಲ್ಲ. ನಿಮ್ಮ ಈ ನಿರಂಕುಶವಾದಿ ಧೋರಣೆ ನಿಮಗೇ ಮುಳುವಾಗುವುದು ನಿಶ್ಚಿತ ಎಂದಿದ್ದಾರೆ.