ಅಲ್ಪ ಜ್ಞಾನ ವಿನಾಶಕ್ಕೆ ದಾರಿ: ಕ್ರೆಡಿಟ್ ತಗೋಳೋದಿಕ್ಕೆ ನಾ ಮುಂದು, ತಾ ಮುಂದು ಎನ್ನುವ ಬಿ.ಜೆ.ಪಿ ನಾಯಕರು ಇಂದು ಮೆಟ್ರೋ ದರ ಏರಿಕೆ ಬಗ್ಗೆಯೂ ಕ್ರೆಡಿಟ್ ತೆಗೆದುಕೊಳ್ಳುವ ಎದೆಗಾರಿಕೆ ತೋರಿಸಿ ನೋಡೋಣ?
ಬೆಂಗಳೂರು: ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಅಜ್ಞಾನಿ ಕರ್ನಾಟಕ ಬಿಜೆಪಿ ಅವರೇ, ಅಲ್ಪ ಜ್ಞಾನ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದರ ಬಗ್ಗೆ ಅರಿವಿರಲಿ ಎಂದು ಬಿಜೆಪಿ ನಾಯಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಮೆಟ್ರೋ ದರ ಏರಿಕೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮೆಟ್ರೋ ಕಾಯಿದೆ ಪ್ರಕಾರ ದರ ಏರಿಕೆ ಮಾಡಲು ಒಂದು ಸಮಿತಿ ಇರುತ್ತದೆ, ಸಮಿತಿಯ ಶಿಫಾರಸ್ಸು ಅನ್ನು ಮೆಟ್ರೋ ಮಂಡಳಿ ಸಭೆಯಲ್ಲಿ ಮಂಡಿಸುತ್ತಾರೆ, ಮಂಡಳಿಯ ಅಧ್ಯಕ್ಷರು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳಿದ್ದು, ಅವರು ದರ ಏರಿಕೆಯನ್ನು ಅಂತಿಮಗೊಳಿಸುತ್ತಾರೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇರುವುದಿಲ್ಲ.
ಮೆಟ್ರೋ ಬೆಂಗಳೂರಿಗೆ ತಂದಿದ್ದು ದೂರದೃಷ್ಟಿಯುಳ್ಳ ಕಾಂಗ್ರೆಸ್ ಸರ್ಕಾರ, ಬುರುಡೆ ಪಕ್ಷದ ಕೆಲವು ನಾಯಕರು ಮೆಟ್ರೋ ತಂದಿದ್ದೇ ನಾವೇ ಎಂದು ಪ್ರತಿದಿನ ಪೋಸ್ ಕೊಡುತ್ತಿದ್ದವರು ಇಂದು ದರ ಏರಿಕೆಯ ಬಗ್ಗೆ ಚಕಾರವೆತ್ತಲು ಆಗದಿರುವುದನ್ನು ನೋಡಿದರೆ ಪಾಪ ಅನ್ನಿಸುತ್ತಿದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆಯೇ ಅಥವಾ ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಎಂಬುದನ್ನು ಬಿ.ಜೆ.ಪಿ ನಾಯಕರು ತಿಳಿಸುವ ಕಷ್ಟ ತೆಗೆದುಕೊಳ್ಳುತ್ತೀರಾ ?
ನಾಯಕನ ಗುಣ ವಿಶೇಷಣ ಒಪ್ಪು ತಪ್ಪು ಎರಡನ್ನೂ ಸಮನಾಗಿ ಸ್ವೀಕರಿಸಿ, ತಪ್ಪನ್ನು ಒಪ್ಪಿಕೊಳ್ಳುವ ಉದಾರತೆ ಇರಬೇಕು. ಕ್ರೆಡಿಟ್ ತಗೋಳೋದಿಕ್ಕೆ ನಾ ಮುಂದು, ತಾ ಮುಂದು ಎನ್ನುವ ಬಿ.ಜೆ.ಪಿ ನಾಯಕರು ಇಂದು ಮೆಟ್ರೋ ದರ ಏರಿಕೆ ಬಗ್ಗೆಯೂ ಕ್ರೆಡಿಟ್ ತೆಗೆದುಕೊಳ್ಳುವ ಎದೆಗಾರಿಕೆ ತೋರಿಸಿ ನೋಡೋಣ? ಕಾಂಗ್ರೆಸ್ ಪಕ್ಷವನ್ನು ದೂಷಿಸಲು ತಮಗೆ ಆತ್ಮಸಾಕ್ಷಿ ಚುಚ್ಚುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.