ಕೊಪ್ಪಳ: ಕಾಂಗ್ರೆಸ್ ಪಕ್ಷವು ಮುಸ್ಲಿಮರ ಪಕ್ಷವಾಗಿದ್ದು, ಈ ಜನ್ಮ ಮಾತ್ರವಲ್ಲ, ಮುಂದಿನ ಜನ್ಮಕ್ಕೂ ಹೋಗಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದ ಗವಿಮಠಕ್ಕೆ ಸೋಮವಾರ ಭೇಟಿ ನೀಡಿ, ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಹಿಂದೂಗಳ ಪಕ್ಷವಲ್ಲ. ಬಿ.ವೈ. ವಿಜಯೇಂದ್ರ ತಂಡ ನಕಲಿ ಖಾತೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೋಗಳನ್ನು ಹಾಕಿ, ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಮಾಧ್ಯಮ ಶ್ರೀಮಂತರಿದ್ದು, ಯಡಿಯೂರಪ್ಪ ಮತ್ತು ಅವರ ಪುತ್ರ ರೈತರ ಹೆಸರಲ್ಲಿ, ವೀರಶೈವ ಲಿಂಗಾಯತರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಎಷ್ಟು ತಿಂದರು? ಭ್ರಷ್ಟ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ ವ್ಯಕ್ತಿ ಯಡಿಯೂರಪ್ಪ. ಅಪ್ಪನ ನಕಲಿ ಸಹಿ ಮಾಡಿದ ಮಗ. ಕೇಂದ್ರ ಹೈಕಮಾಂಡ್ ಇಂತಹ ಭ್ರಷ್ಟ ಕುಟುಂಬಕ್ಕೆ ನನ್ನನ್ನು ಉಚ್ಛಾಟನೆ ಮಾಡುವ ಮೂಲಕ ಹಸಿರು ನಿಶಾನೆ ತೋರಿಸಿದ್ದೀರಾ. ಯಡಿಯೂರಪ್ಪನವರಿಗೆ ಕರ್ನಾಟಕ ಬಿಜೆಪಿ ಲೀಜಿಗೆ ಕೊಟ್ಟಿದ್ದೀರಾ ಅಥವಾ ಆ ಕುಟುಂಬ ಮಾರಿಕೊಂಡು ಬಿಟ್ಟಿದ್ದೀರಾ ಎನ್ನುವ ಪ್ರಶ್ನೆ ಜನರಲ್ಲಿದೆ ಎಂದು ಕೇಂದ್ರ ಬಿಜೆಪಿ ಮುಖಂಡರಿಗೂ ಪ್ರಶ್ನಿಸಿದರು.
ಬಿಜೆಪಿ ಈಗ ಹಿಂದೂಗಳ ಪರವಾಗಿಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಕ್ಕಳದ್ದು ಸಾಕಷ್ಟು ಹಗರಣಗಳಿದ್ದು ಯಡಿಯೂರಪ್ಪ ಮೇಲೆ ಫೋಕ್ಸೋ ಪ್ರಕರಣ ಇದ್ದು, ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡಿದರೆ, ಬಿ.ಎಸ್.ವೈ. ಜೈಲಿಗೆ ಹೋಗುತ್ತಾರೆ ಎಂದ ಯತ್ನಾಳ, ಹಣ ಕೊಟ್ಟು ಕೆಲವರನ್ನು ಖರೀದಿಸಿರಬಹುದು. ಆದರೆ ನಾನು ರಾಜ್ಯ ಸುತ್ತುತ್ತೇನೆ. ಜನರ ಅಭಿಪ್ರಾಯ ಪಡೆಯುತ್ತೇನೆ. ಹಿಂದೂಗಳ ಪರವಾಗಿ, ರಾಜ್ಯದ ಭವಿಷ್ಯ, ನೀರಾವರಿ ಇಲ್ಲ. ಗ್ಯಾರಂಟಿ ಯೋಜನೆಯಿಂದ ಸಂಪೂರ್ಣವಾಗಿ ಅಭಿವೃದ್ಧಿ ಆಗುವುದಿಲ್ಲ ಎಂದರು.
ಕೃಷ್ಣಾ ಬೀ ಸ್ಕೀಂ ಯೋಜನೆ ಪೂರ್ಣಗೊಳಿಸಿದರೆ, ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಎಕರೆ ನೀರಾವರಿ ಆಗಲಿದೆ. ಇದಕ್ಕೆ ಯಾರೂ ಅನುದಾನ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ೨೫ ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ೨,೫೦೦ ಕೋಟಿ ರೂ. ಕೂಡಾ ನೀಡಲಿಲ್ಲ. ಹಣ ಏಕೆ ಕೊಟ್ಟಿಲ್ಲ ಎಂದು ಅಂದಿನ ಸಚಿವರಾಗಿದ್ದ ಬಿ.ಎಸ್.ವೈ. ಅಭಿಮಾನಿ ಗೋವಿಂದ ಕಾರಜೋಳರನ್ನೇ ಕೇಳಬೇಕು. ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೆ ಯಡಿಯೂರಪ್ಪ. ಡ್ರಗ್ಸ್ ಹಿಡಿಯುತ್ತೇನೆ ಎಂದು ಓಡಾಡಿದ, ಐಪಿಎಸ್ ಅಧಿಕಾರಿಯೊಬ್ಬ ಸಿನಿಮಾ ನಟಿಯರ ಮೊಬೈಲಿನಲ್ಲಿದ್ದ ಬಿ.ವೈ.ವಿಜಯೇಂದ್ರನ ವೀಡಿಯೋ ಡಿಲೀಟ್ ಮಾಡುತ್ತಿದ್ದನು ಎಂದರು.