ಮುಖ್ಯಮಂತ್ರಿಗಳೇ ವಿವಾದದ ಹೊಣೆಹೊತ್ತು ಜನರ ಕ್ಷಮೆಯಾಚಿಸಲಿ

0
26

ಧಾರವಾಡ: ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೇ ವಿವಾದದ ಹೊಣೆ ಹೊತ್ತು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸಲ್ಮಾನರ ಓಲೈಕೆಯಲ್ಲಿ ನಿರತವಾಗಿರುವ ಕಾಂಗ್ರೆಸ್ ಸರಕಾರ, ಬಹುಕಾಲದಿಂದ ಜನರು ನಂಬಿಕೊಂಡು ಬಂದಿರುವ ಸಂಸ್ಕೃತಿ, ನಂಬಿಕೆ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಕೂಡಲೇ ಇದಕ್ಕೆ ಕಾರಣಕರ್ತರಾದ ಹಿರಿಯ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಖಂಡನೀಯ. ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಸರಕಾರ ಜನರ ಆಕ್ರೋಶಕ್ಕೆ ಕಾರಣವಾಗುವ ಮುನ್ನವೇ ಎಚ್ಚೆತ್ತುಕೊಂಡರೆ ಒಳ್ಳೆಯದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರಕ್ಕೆ ಬಂದಾಗಿನಿಂದ ಸಮಾಜ ಒಡೆಯುವ ಹುನ್ನಾರ ನಡೆಸಿದೆ. ಈ ದಿಸೆಯಲ್ಲಿ ಆಡಳಿತವನ್ನು ಸಂಪೂರ್ಣವಾಗಿ ಅಲ್ಪಸಂಖ್ಯಾತರ ಹಿತಕಾಯಲು ಬಳಸಲಾಗುತ್ತಿದೆ. ಹಿಂದೂ ಧರ್ಮದ ಅವಿಭಾಜ್ಯವಾಗಿರುವ ಜನಿವಾರ, ಶಿವದಾರ, ವಿಭೂತಿ, ಕುಂಕುಮಗಳನ್ನು ಅವಮಾನಿಸುತ್ತಿದ್ದರೆ ಇನ್ನೊಂದೆಡೆ ಬುರ್ಖಾ, ಹಿಜಾಬ್‌ಗಳಿಗೆ ಯಾವುದೇ ವಿರೋಧ ಇಲ್ಲದಿರುವುದು ಸರಕಾರ ಮುಸಲ್ಮಾನರಿಗೆ ಮಾತ್ರ ಎನ್ನುವಂತಾಗಿದೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಅನುದಾನ ಕೊರತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಈವರೆಗೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಕಾರಣದಿಂದ ಜನರ ಗಮನ ಬೇರೆಡೆ ಸೆಳೆಯುವ ದಿಸೆಯಲ್ಲಿ ಸರಕಾರ ಜನಿವಾರ ತೆಗೆಸುವಂಥ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ತಮ್ಮ ವ್ಯಕ್ತಿಗತ ಮತ್ತು ಸರಕಾರದ ವೈಫಲ್ಯವನ್ನು ಮರೆಮಾಚಲು ಇಂಥ ವಿಷಯಗಳತ್ತ ಜನರ ಚಿತ್ತ ಹರಿಸಲು ಮುಂದಾಗುತ್ತಿದೆ. ಮರೆಮಾಚುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಸಿದ್ಧಹಸ್ತರು ಎಂದು ಆರೋಪಿಸಿದರು.

Previous articleಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಾಳೆಯೇ ಮಹದಾಯಿ ಯೋಜನೆ ಜಾರಿ
Next articleಜನಿವಾರ ಕಳಚಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರ್ಕಾರ ಬದ್ಧ