ಬಾಗಲಕೋಟೆ: ಸೋಲಾಪುರದಲ್ಲಿ ಬಾಗಲಕೋಟೆ ಬಸ್‌ಗಳಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಸರಿ ಹೋಗದಿದ್ದರೆ ಅಲ್ಲಿನ ಸರ್ಕಾರದ ಜತೆ ತಾವೇ ಮಾತುಕತೆ ನಡೆಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಸ್ಸಿಗೆ ಅವರು ಮಸಿ ಬಳಿಯೋದು, ಅವರ ಬಸ್ಸಿಗೆ ನಾವು ಮಸಿ ಬಳಿಯೋದರಲ್ಲಿ ಅರ್ಥವಿಲ್ಲ. ಇದರಿಂದ ನಷ್ಟವಾಗೋದು ಎರಡು ಸಂಸ್ಥೆಗಳಿಗೆ. ಅಲ್ಲಿ ಅವರು ಇಲ್ಲಿಗೆ, ನಮ್ಮವರು ಅಲ್ಲಿಗೆ ಹೋಗುವುದು ಇದ್ದೇ ಇರುತ್ತದೆ ಇಂಥ ಘಟನೆಗಳಿಗೆ ಆಸ್ಪದ ನೀಡಬಾರದು ಎಂದರು.
ಮಹಾರಾಷ್ಟ್ರ ಸರ್ಕಾರ ಶಿವಸೇನೆ ಸೇರಿದಂತೆ ತಪ್ಪು ಮಾಡುತ್ತಿರುವವರನ್ನು ಬೆಂಬಲಿಸುವುದು ತಪ್ಪಾಗುತ್ತದೆ. ಅಲ್ಲಿ ಅವರು ಹಾಗೆ ಮಾಡಿದರೆ ಇಲ್ಲಿ ಸುಮ್ಮನಿರುತ್ತಾರಾ? ಅದನ್ನು ಅರ್ಥ ಮಾಡಿಕೊಳ್ಳಬೇಕೆಂದು ತಿವಿದರು.
ನಮ್ಮ ಮುಖ್ಯ ಕಾರ್ಯದರ್ಶಿಗಳು ಅಲ್ಲಿನ ಸರ್ಕಾರದ ಜತೆಗೆ ಮಾತನಾಡಿದ್ದಾರೆ ಸೋಲಾಪುರ ಜಿಲ್ಲಾ ಮಟ್ಟದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ಜರುಗಲಿದೆ. ಅದು ಆಗದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಮಾತುಕತೆ ನಡೆಸುತ್ತಾರೆ ಅದಕ್ಕೂ ಸರಿ ಹೋಗದಿದ್ದರೆ ನಾನೇ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.