ಮಲಪ್ರಭ ಅಣೆಕಟ್ಟಿನಿಂದ ಎಚ್ಚರಿಕೆ ಸಂದೇಶ

0
34

ಬಾಗಲಕೋಟೆ(ಕುಳಗೇರಿ ಕ್ರಾಸ್): ನವಿತೀರ್ಥ ಜಲಾಶಯದಿಂದ ಮತ್ತೆ ಮಲಪ್ರಭಾ ನದಿಗೆ ನೀರನ್ನು ಬಿಡಲಾಗಿದೆ. ಎರಡು ದಿನಗಳ ಹಿಂದೆ ೨ರಿಂದ ೮ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗಿತ್ತು. ಸದ್ಯ ೧೦ರಿಂದ ೧೫ ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು ಪ್ರವಾಹದ ನೀರು ನದಿ ಪಾತ್ರದ ಗ್ರಾಮಗಳಿಗೆ ತಟ್ಟಲಿದೆ.
ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು ಸತತ ಮಳೆಗೆ ನವಿಲುತಿರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಪ್ರಸ್ತುತ ಒಳಹರಿವು ೧೦,೦೦೦ ಸಾವಿರ ಕ್ಯೂಸೆಕ್ ಇದ್ದು ಮುಂಜಾಗ್ರತಾ ಕ್ರಮವಾಗಿ ೧೫೦೦೦ ಸಾವಿರ ಕ್ಯೂಸೆಕ್ ನೀರನ್ನು ನದಿ ಮೂಲಕ ಹೊರ ಬಿಡಲಾಗಿದೆ. ಮಲಪ್ರಭಾ ಆಣೆಕಟ್ಟಿನ ಕೆಳಭಾಗದಲ್ಲಿನ ಗ್ರಾಮಗಳಿಗೆ ಜಲಾಶಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಮುಂಜಾಗ್ರತೆ ವಹಿಸುವಂತೆ ವಿನಂತಿಸಿದ್ದಾರೆ.
ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ. ಕಳೆದ ತಿಂಗಳಿಂದ ಪ್ರವಾಹದ ನೀರು ಬಂದು ರೈತರ ಬೆಳೆಗಳು ನಾಶವಾಗಿದ್ದವು. ಬೆಳೆಗಳನ್ನು ಕಳೆದುಕೊಂಡಿದ್ದ ರೈತರು ಮತ್ತೆ ಪ್ರವಾಹದ ಬೀತಿ ಎದುರಿಸುವಂತಾಗಿದೆ. ಚೇತರಿಸಿಕೊಂಡ ಪೇರಲ ಸೇರಿದಂತೆ ತೋಟಗಾರಿಕೆ ಬೆಳೆಗಳು ಮತ್ತೆ ಜಲಾವೃತಗೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೇತುವೆ ಜಲಾವೃತ: ಹುಬ್ಬಳ್ಳಿ-ಸೊಲ್ಲಾಪೂರ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಹಳೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದೆ. ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.

Previous articleಮಗನಿಗೆ ಪಾಸ್ ಮಾಡಲು ಶಿಕ್ಷಕನ ಒತ್ತಾಯ
Next articleಗಣಪತಿ ಆತ್ಮಹತ್ಯೆ ಪ್ರಕರಣ ಸಚಿವ ಜಾರ್ಜ್ ನಿರಾಳ