ಮತ್ಸ್ಯ ಸಂಪತ್ತು: ಸಾಮೂಹಿಕ ಸಮುದ್ರ ಪೂಜೆ

0
22

ಮಂಗಳೂರು: ಏಳುಪಟ್ಲ ಮೊಗವೀರ ಸಂಯುಕ್ತ ಸಭಾದ ವತಿಯಿಂದ ಸಾಮೂಹಿಕ ಸಮುದ್ರ ಪೂಜೆ ಸೋಮವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನಡೆಯಿತು.
ಮಳೆಗಾಲದ ಎರಡು ತಿಂಗಳ ನಿಷೇಧ ಅವಧಿ ಮುಗಿದು ಆ. ೧ರಿಂದ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶ ದೊರಕಿದ್ದು, ಈಗಾಗಲೇ ಶೇ. ೪೦ಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳು ಕಡಲಿಗಿಳಿದು ಮೀನುಗಾರಿಕೆ ಆರಂಭಿಸಿವೆ. ಹಾಗಿದ್ದರೂ ಮೀನುಗಾರರ ಸಮುದ್ರ ಪೂಜೆಯೊಂದಿಗೆ ಜಿಲ್ಲೆಯಲ್ಲಿ ಕಡಲ ಮೀನುಗಾರಿಕೆ ಅಧಿಕೃತವಾಗಿ ಆರಂಭಗೊಳ್ಳುತ್ತದೆ.


ಸಮದ್ರ ಪೂಜೆಯ ಆರಂಭದಲ್ಲಿ ಭಜನಾ ಸಂಕೀರ್ತನೆ ಹಾಗೂ ಪೂಜೆಯ ಬಳಿಕ ಕದ್ರಿ ಜೋಗಿ ಮಠದ ಮಠಾಧೀಶ ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ನೇತೃತ್ವದಲ್ಲಿ ಸಮುದ್ರಕ್ಕೆ ಹಾಲು-ಹಣ್ಣು ಹಂಪಲುಗಳನ್ನು ಸಮರ್ಪಿಸಲಾಯಿತು. ಪ್ರಕ್ಷುಬ್ಧಗೊಂಡ ಕಡಲು ಶಾಂತವಾಗಿ ಮತ್ಸ್ಯ ಸಂಪತ್ತು ವೃದ್ಧಿಸಲಿ ಎಂದು ಪ್ರಾರ್ಥಿಸಲಾಯಿತು.
ಮತ್ಯೋದ್ಯಮಿ ಸಂದೀಪ್ ಪುತ್ರನ್ ಹಾಗೂ ಉಳ್ಳಾಲ, ಹೊಗೆ ಬಜಾರ್ ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ಹೇಮಂತ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಸಭಾದ ಅಧ್ಯಕ್ಷ ಬೋಳಾರ ಸುಭಾಶ್ಚಂದ್ರ ಕಾಂಚನ್ ಅತಿಥಿಗಳನ್ನು ಹಾಗೂ ವಿವಿಧ ಗ್ರಾಮಗಳ ಗುರಿಕಾರರು ಮತ್ತು ಸದಸ್ಯರನ್ನು ಸ್ವಾಗತಿಸಿ, ಪೂರ್ವಜರು ಶತಮಾನಗಳಿಂದ ಆಚರಿಸಿಕೊಂಡು ಬಂದಂತೆ ಈ ಬಾರಿಯೂ ಮೀನುಗಾರಿಕೆಯ ಋತು ಆರಂಭದಲ್ಲಿ ಗಂಗಾಮಾತೆಗೆ ಹಾಲು-ಹಣ್ಣು ಅರ್ಪಿಸಿ, ಸಾಮೂಹಿಕವಾಗಿ ಸಮುದ್ರ ಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ಬೋಳೂರು ವಂದಿಸಿದರು.
ಪದಾಧಿಕಾರಿಗಳಾದ ಹೇಮಚಂದ್ರ ಸಾಲ್ಯಾನ್ ಪಡುಹೊಗೆ, ರಂಜನ್ ಕಾಂಚನ್ ಬೋಳೂರು, ಸುರೇಶ್ ಸುವರ್ಣ ನೀರೇಶ್ವಾಲ್ಯ, ಶ್ಯಾಮಸುಂದರ್ ಕಾಂಚನ್, ಕುದ್ರೋಳಿ, ಕದ್ರಿ ಕ್ಷೇತ್ರದ ಪ್ರತಿನಿಧಿ ನಾರಾಯಣ ಕೋಟ್ಯಾನ್ ಬೊಕ್ಕಪಟ್ಲ, ವಿವಿಧ ಗ್ರಾಮಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು ಹಾಗೂ ಮಹಿಳಾ ಸಂಘಗಳ ಸದಸ್ಯೆಯರು ಈ ಸಂದರ್ಭ ಉಪಸ್ಥಿತರಿದ್ದರು. ಇದೇ ದಿನ ಬೆಳಿಗ್ಗೆ ೭ ಪಟ್ಟ ಮೊಗವೀರ ಸಭಾದ ವತಿಯಿಂದ ಕದ್ರಿ ಮಠ ಮತ್ತು ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ನಡೆಯಿತು.

Previous articleಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು: ಐವನ್ ವಿವಾದಾತ್ಮಕ ಹೇಳಿಕೆ
Next articleಭ್ರಷ್ಟಾಚಾರ ಪ್ರಕರಣ: ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ