ಬ್ಲಾಕ್ ಮೇಲ್ ಮಾಡುವವರು ಗಂಟುಮೂಟೆ ಕಟ್ಟಿ ಹೊರಡುವುದು ಒಳ್ಳೆಯದು…

0
7

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಹೋರಾಟವನ್ನು ನಡೆಸುತ್ತಲೇ ಬಂದಿದೆ

ಬೆಂಗಳೂರು: ಕನ್ನಡಿಗರ ಬಹುದಿನಗಳ ಕನಸು ನನಸಾಗಲಿದೆ. ಕನ್ನಡನಾಡಿನ ಮಕ್ಕಳು ನಿರುದ್ಯೋಗದಿಂದ ನರಳುವುದು ತಪ್ಪುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಇಂದು ಬೆಳಿಗ್ಗೆಯಷ್ಟೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದಿರುವುದಕ್ಕೆ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಸಂಸ್ಥೆಗಳು ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಉದ್ಯಮಿಗಳ ಟೀಕೆ ಕುರಿತಂತೆ ಸರಣಿ ಪೋಸ್ಟ್‌ ಮಾಡಿದ್ದಾರೆ ಇದು ಎಂದೋ ಆಗಬೇಕಿದ್ದ ಕಾರ್ಯ. ಸಿದ್ಧರಾಮಯ್ಯ ಅವರ ಕನ್ನಡ ಕಾಳಜಿ ಮತ್ತು ಬದ್ಧತೆಯಿಂದ ಈಗ ಅದು ಸಾಧ್ಯವಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ವಿಧೇಯಕ ವಿಧಾನಮಂಡಲದ ಉಭಯದ ಅಧಿವೇಶನಗಳಲ್ಲಿ ಮಂಡನೆಯಾಗಿ ಅಂಗೀಕಾರವಾಗಬೇಕಿದೆ. ಜನಪ್ರತಿನಿಧಿಗಳು ಸರ್ವಾನುಮತದಿಂದ ಈ ವಿಧೇಯಕವನ್ನು ಅನುಮೋದಿಸಿ, ಅಂಗೀಕಾರ ನೀಡುತ್ತಾರೆಂಬ ವಿಶ್ವಾಸವಿದೆ. ಕನ್ನಡಿಗರ ಬಹುದಿನಗಳ ಕನಸು ನನಸಾಗಲಿದೆ. ಕನ್ನಡನಾಡಿನ ಮಕ್ಕಳು ನಿರುದ್ಯೋಗದಿಂದ ನರಳುವುದು ತಪ್ಪುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಹೋರಾಟವನ್ನು ನಡೆಸುತ್ತಲೇ ಬಂದಿದೆ. ಜುಲೈ 1ರಂದು ರಾಜ್ಯದ ಎಲ್ಲ 31 ಜಿಲ್ಲಾಕೇಂದ್ರಗಳಲ್ಲಿ ಲಕ್ಷಾಂತರ ಕರವೇ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿ ಕಾನೂನು ಜಾರಿಗೆ ಒತ್ತಾಯಿಸಿದ್ದರು. ನಮ್ಮ ಚಳವಳಿ ಕೊನೆಗೂ ಫಲ ಕಂಡಿದೆ. ಈ ಬೆಳವಣಿಗೆಗಳ ಮಧ್ಯೆ ಕೆಲ ಕಾರ್ಪೊರೇಟ್ ವಲಯದ ಪ್ರಚಾರಪ್ರಿಯ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.‌ ಅವರು ಎತ್ತುತ್ತಿರುವ ಆಕ್ಷೇಪಗಳನ್ನೂ ಗಮನಿಸಿದ್ದೇನೆ. ಇಂಥ ಕೂಗುಮಾರಿಗಳಿಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತೂ ನೀಡಕೂಡದು. ಇವರು ಕನ್ನಡದ್ರೋಹಿಗಳು. ವಿಧೇಯಕ ಜಾರಿಗೆ ತಂದರೆ ಕರ್ನಾಟಕದಲ್ಲಿರುವ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿರುವ ಉದ್ಯಮಗಳು ಬೇರೆ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಒಬ್ಬ ಉದ್ಯಮಿ ಹೇಳಿದ್ದಾರೆ. ಇಂಥ ಬ್ಲಾಕ್ ಮೇಲ್ ಹೇಳಿಕೆಗಳನ್ನು ನಾವು ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಇಂಥ ಬ್ಲಾಕ್ ಮೇಲರ್‌ಗಳು ನಿಜವಾದ ಅರ್ಥದಲ್ಲಿ ದೇಶದ್ರೋಹಿಗಳು. ಯಾರಿಗಾದರೂ ಕರ್ನಾಟಕದಲ್ಲಿ ಉದ್ಯಮ ನಡೆಸುವುದು ಕಷ್ಟವಾದರೆ ಸಹಜವಾಗಿ ಅವರು ತಮ್ಮ ರಾಜ್ಯಗಳಿಗೋ, ಇನ್ಯಾವುದೋ ರಾಜ್ಯಗಳಿಗೋ ಹೋಗುತ್ತಾರೆ, ಬ್ಲಾಕ್ ಮೇಲ್ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವುದಿಲ್ಲ. ಇವರಿಗೆ ಕರ್ನಾಟಕದಲ್ಲೇ ಇರಿ ಎಂದು ನಾವ್ಯಾರೂ ದುಂಬಾಲು ಬಿದ್ದಿಲ್ಲ. ಹೀಗೆ ಬ್ಲಾಕ್ ಮೇಲ್ ಮಾಡುವವರು ಗಂಟುಮೂಟೆ ಕಟ್ಟಿ ಹೊರಡುವುದು ಒಳ್ಳೆಯದು. ಕರ್ನಾಟಕಕ್ಕೆ ಈ ಕಾರ್ಪೊರೇಟ್ ಉದ್ಯಮಗಳು ಬರುವುದಕ್ಕೆ ಮುನ್ನವೂ ವೈಭವದ ನಾಡು ನಮ್ಮದಾಗಿತ್ತು. ಇವರು ಇದ್ದರೂ, ಇಲ್ಲದೇ ಇದ್ದರೂ ಕರ್ನಾಟಕ ಇತ್ತು, ಇದೆ ಮತ್ತು ಮುಂದೆಯೂ ಇರುತ್ತದೆ. ಕನ್ನಡನಾಡು ಎಂದಿಗೂ ದಿವಾಳಿಯಾಗುವುದಿಲ್ಲ. ನಿಜ ಹೇಳಬೇಕೆಂದರೆ ಈ ವ್ಯಾಪಾರಿ ಸಮೂಹ ಇಲ್ಲಿಗೆ ಬರುವುದಕ್ಕೆ ಮುನ್ನವೇ ನೆಮ್ಮದಿಯಾಗಿತ್ತು. ಕಾರ್ಪೊರೇಟ್ ವ್ಯಾಪಾರಿಗಳು ಕರ್ನಾಟಕಕ್ಕೆ ಬರುತ್ತಿರುವುದು ಭೌಗೋಳಿಕ ವಾತಾವರಣ, ಇಲ್ಲಿನ ಜನರ ಹೃದಯವೈಶಾಲ್ಯತೆ ಮತ್ತು ಇಲ್ಲಿ‌ ದೊರೆಯುವ ಸಂಪನ್ಮೂಲಗಳ ಕಾರಣಕ್ಕೆ. ಅವರು ಇಲ್ಲಿ ಬಂದು ವ್ಯಾಪಾರ ಮಾಡುತ್ತಾರೆಯೇ ಹೊರತು ಧರ್ಮ ಛತ್ರ ನಡೆಸುತ್ತಿಲ್ಲ. ಅವರು ನೆಲದ ಕಾನೂನನ್ನು, ಸಂಸ್ಕೃತಿಯನ್ನು, ಜನರ ಬದುಕನ್ನು ಗೌರವಿಸುವುದನ್ನು ಕಲಿಯಬೇಕು. ಉದ್ಯೋಗ ಮೀಸಲಾತಿ ವಿಧೇಯಕ ಕುರಿತಾಗಿ ಅಪಸ್ವರ ಎತ್ತುತ್ತಿರುವವರನ್ನು ಗಮನಿಸುತ್ತಿದ್ದೇವೆ.ಇವರು ಪ್ರತಿನಿಧಿಸುವ ಸಂಸ್ಥೆಗಳ ವಿರುದ್ಧ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಕನ್ನಡಿಗರನ್ನು ವಿರೋಧಿಸುವ ಇಂಥ ದೇಶದ್ರೋಹಿಗಳನ್ನು ಹೇಗೆ ವಿರೋಧಿಸುವುದು ಎಂಬುದು ನಮಗೆ ಗೊತ್ತಿದೆ. ಹೀಗಾಗಿ ಇವರು ತಮ್ಮ ನಾಲಿಗೆ ಬಿಗಿಹಿಡಿದು ಮಾತಾಡುವುದು ಒಳ್ಳೆಯದು. ರಾಜ್ಯ ಸರ್ಕಾರ ಇಂಥ ಭ್ರಷ್ಟ, ನಾಡದ್ರೋಹಿ, ದೇಶದ್ರೋಹಿ,‌ ಸಮಾಜಘಾತಕ ಶಕ್ತಿಗಳ ಅರಚಾಟಕ್ಕೆ ಧೃತಿಗೆಡಬಾರದು. ನಿಮ್ಮನ್ನು ಆಯ್ಕೆ ಮಾಡಿರುವುದು ಕರ್ನಾಟಕದ ಸಾಮಾನ್ಯ ಜನತೆಯೇ ಹೊರತು ಈ ಕಾರ್ಪೊರೇಟ್ ಕುಳಗಳಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲೇ ವಿಧೇಯಕ ಮಂಡನೆಯಾಗಬೇಕು. ಸರ್ಕಾರದೊಂದಿಗೆ ನಾವು ಇರುತ್ತೇವೆ. ಅದ್ಯಾರು ತಡೆಯುವರೋ ನೋಡೋಣ ಎಂದಿದ್ದಾರೆ.

Previous articleಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ: ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ
Next articleಕಂಬಳ ‘ಲಕ್ಕಿ’ ಇನ್ನಿಲ್ಲ