ಹೊಸಪೇಟೆ: ಬೆಂಗಳೂರಿನಲ್ಲಿ ಮಳೆ ನೀರುಗಾಲುವೆಯನ್ನು ಶಾಶ್ವತವಾಗಿ ರೂಪಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ವಿಶ್ವಬ್ಯಾಂಕಿನಿಂದ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಿಂದ 2 ಸಾವಿರ ಕೋಟಿಯಷ್ಟು ನೆರವು ಪಡೆಯಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ವಿಜಯನಗರದ ಹೊಸಪೇಟೆಯಲ್ಲಿ ನಡೆಯಲಿರುವ ಸಾಧನೆ ಸಮಾವೇಶದ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಬೆಂಗಳೂರಿನಲ್ಲಿ ನಮ್ಮ ಅಧಿಕಾರಿಗಳ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಕೆಲವು ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಜಾಗದಲ್ಲಿ ನೀರು ನುಗ್ಗಿದೆ. ಮಳೆ ಹಾನಿ ಪ್ರದೇಶಕ್ಕೆ ನಾನು ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ, ಮಳೆ ಹಾಗೂ ಪ್ರಕೃತಿ ಯಾರ ನಿಯಂತ್ರಣದಲ್ಲೂ ಇಲ್ಲ. ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ನಮ್ಮ ಅಧಿಕಾರಿಗಳು ನಾಲ್ಕು ದಿನಗಳಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಮಳೆನೀರುಗಾಲುವೆಯನ್ನು ಶಾಶ್ವತವಾಗಿ ರೂಪಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ವಿಶ್ವಬ್ಯಾಂಕಿನಿಂದ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಿಂದ 2 ಸಾವಿರ ಕೋಟಿಯಷ್ಟು ನೆರವು ಪಡೆಯಲಾಗಿದೆ ಎಂದರು.
ಜನರ ಋಣ ತೀರಿಸಲು ಸರ್ಕಾರದಿಂದ ಯೋಜನೆ: ರಾಜ್ಯ ಸರ್ಕಾರ ಕೇವಲ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತಿಲ್ಲ. ಜನರಿಗೆ ‘ಭೂ ಗ್ಯಾರಂಟಿ’ ಯೋಜನೆ ಮೂಲಕ 1 ಕೋಟಿಗೂ ಹೆಚ್ಚು ಜನರಿಗೆ ಭೂ ದಾಖಲಾತಿ ಪತ್ರ ನೀಡಿ ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ, ನೂರು ವರ್ಷಗಳಲ್ಲಿ ಮಾಡಲಾಗದ ಕೆಲಸವನ್ನು ನಮ್ಮ ಸರ್ಕಾರ ಕಂದಾಯ ಇಲಾಖೆ ಮೂಲಕ ಮಾಡಿ, ಹೊಸ ಇತಿಹಾಸ ಬರೆಯುತ್ತಿದೆ. ಕಂದಾಯ ಇಲಾಖೆಯ ಮೂಲಕ ನೀಡುತ್ತಿರುವ ಈ ಭೂ ಗ್ಯಾರಂಟಿ ಇತಿಹಾಸದ ಪುಟ ಸೇರಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಾನು ವಾಸವಿರುವ ಜಾಗವನ್ನು ತನ್ನದಾಗಿಸಿಕೊಳ್ಳುವ ಆಸೆ ಇರುತ್ತದೆ. ಪರಿಶಿಷ್ಟರು, ಹಿಂದುಳಿದವರು ಹಾಗೂ ಭೂರಹಿತವಾಗಿರುವವರು ಕಳೆದ ಹಲವು ವರ್ಷಗಳಿಂದ ದಾಖಲೆ ಇಲ್ಲದೆ ಮನೆ ಕಟ್ಟಿಕೊಂಡು ಪರದಾಡುತ್ತಿದ್ದರು. ಹೀಗಾಗಿ ನಮ್ಮ ಸರ್ಕಾರ ಇದಕ್ಕೆ ಪರಿಹಾರ ನೀಡಿದೆ.