ಬಾಗಲಕೋಟೆ: ರಾಜ್ಯದ ರಾಜ್ಯಪಾಲರು ರಾಜಕೀಯ ಮಾಡುವ ಜತೆಗೆ ಕೇಂದ್ರ ಸರಕಾರ ಹಾಗೂ ಬಿಜೆಪಿ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಆರೋಪಿಸಿದರು.
ಜಿಲ್ಲೆಯ ಬೀಳಗಿ ತಾಲೂಕಿ ಬಾಡಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರಾಜ್ಯದ ಮುಖ್ಯಮಂತ್ರಿಗೆ ನೋಟಿಸ್ ಕೊಡುವ ಮೊದಲು ಕಾನೂನು ಸಲಹೆ ಪಡೆಯಬೇಕಾಗಿತ್ತು. ಸಲಹೆ ಪಡೆಯದೇ ನೊಟೀಸ್ ನೀಡಿರುವುದು ಕೆಟ್ಟ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿಯೇತರ ಸರಕಾರ ಇರುವ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜಭವನ ಕಚೇರಿಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಗೊಂದಲ ಸೃಷ್ಟಿಸುವ ಜತೆಗೆ, ಸರಕಾರವನ್ನೇ ಬೀಳಿಸಬೇಕು ಎಂಬ ದುರುದ್ದೇಶದಿಂದ ಬಿಜೆಪಿ ಈ ರೀತಿ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರಕಾರ ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಅನುದಾನ ಕೊಡಲ್ಲ. ಆದರೆ, ರಾಜ್ಯ ಸರಕಾರವನ್ನು ಬೀಳಿಸಬೇಕು ಎಂಬ ಹುನ್ನಾರ ಬಿಜೆಪಿ ನಿರಂತರ ಮಾಡುತ್ತಿದೆ ಎಂದು ಆರೋಪಿಸಿದರು.