ಬಹು ನಿರೀಕ್ಷಿತ ‘ಸಾಕ್ಷಿ’ ಬಿಡುಗಡೆ

0
17

ಬೆಂಗಳೂರು: ಖ್ಯಾತ ಶಿಕ್ಷಣತಜ್ಞ, ಉಪನ್ಯಾಸಕ, ಅಂಕಣಕಾರ ಡಾ. ಗುರುರಾಜ ಕರಜಗಿಯವರ ಹೊಸ ಗ್ರಂಥ ‘ಸಾಕ್ಷಿ’ ಈ ಭಾನುವಾರ (ಆ. 18) ಬೆಳಗ್ಗೆ ಬಿಡುಗಡೆಯಾಗಲಿದೆ. ಈ ಗ್ರಂಥವನ್ನು ಲೋಕ ಶಿಕ್ಷಣ ಟ್ರಸ್ಟ್ ಗ್ರಂಥಮಾಲೆ ಪ್ರಕಟಿಸಿದೆ.
ಬೆಂಗಳೂರಿನ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಖ್ಯಾತ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಪ್ರಖ್ಯಾತ ಹಿರಿಯ ಪತ್ರಕರ್ತರು, ಪಬ್ಲಿಕ್ ಟಿವಿ ಸಂಸ್ಥಾಪಕ, ಎಚ್. ಆರ್. ರಂಗನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು; ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ, ವಿಧಾನ ಪರಿಷತ್ ಸದಸ್ಯರೂ ಆದ ಯು. ಬಿ. ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಡಾ. ಗುರುರಾಜ ಕರಜಗಿ ಉಪಸ್ಥಿತರಿರಲಿದ್ದಾರೆ.


ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಕರ್ಜಗಿಯವರು, ದೇಶ-ವಿದೇಶಗಳ ನಿಯತಕಾಲಿಕಗಳಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 16 ವರ್ಷ ವಿ.ವಿ.ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ, ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿ ಹಾಗೂ ನಿರ್ದೇಶಕರಾಗಿ, ಅಂತಾರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಕರ್ಜಗಿಯವರು, ಈಗ ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷರಾಗಿದ್ದಾರೆ. ಸೃಜನಶೀಲತೆ, ಸಂವಹನ ಕಲೆ, ಮುಂತಾದವುಗಳಲ್ಲಿ ಆಸಕ್ತಿ ಹೊಂದಿರುವ ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳ ಬಗೆಗಿನ ಬರಹ ಮತ್ತು ಉಪನ್ಯಾಸಗಳಿಗೆ ದೇಶವಿದೇಶಗಳಲ್ಲೂ ಪ್ರಸಿದ್ಧರು.


ಈ ಗ್ರಂಥದ ಕುರಿತು ಡಾ. ಕರಜಗಿಯವರು ಹೇಳುವುದು ಹೀಗೆ: ‘ಡಾನ್ ಎನ್ನುವುದೊಂದು ದೊಡ್ಡ ನದಿ. ಡಾನ್ ಕೊಸ್ಯಾಕ್ಗಳ ಬದುಕು ಮತ್ತು ಹೋರಾಟಗಳನ್ನು, ಮೊದಲನೆಯ ಮಹಾಯುದ್ಧದ ಅನಾಹುತಗಳನ್ನು, ರಶಿಯಾದ ಕ್ರಾಂತಿಯ ಹಾಗೂ ಅದರ ಯಾದವೀಕಲಹವನ್ನು ಸಾಕ್ಷಿಯಾಗಿ ಕಂಡದ್ದು ಈ ನದಿ ಡಾನ್. ನಾವೂ ಆ ಡಾನ್ ನದಿಯ ತರಹವೇ ಎಲ್ಲಿಯೋ ಹುಟ್ಟುತ್ತೇವೆ, ಎಲ್ಲಿಯೋ ಬೆಳೆಯುತ್ತೇವೆ. ಮತ್ತೆ ವಿಧಿ ತೋರಿದಲ್ಲಿ ಒಂದು ದಿನ ಸಾಯುತ್ತೇವೆ. ಆದರೆ ನಾವು ಬದುಕಿದಷ್ಟೂ ವರ್ಷ ನಮ್ಮ ಸುತ್ತಮುತ್ತಲೂ ಜರುಗುವ ಘಟನೆಗಳಿಗೆ, ಸಾಕ್ಷಿಯಾಗುತ್ತೇವೆ. ಇದರೊಂದಿಗೆ ಎಲ್ಲ ಬದಲಾವಣೆಗಳೊಂದಿಗೆ ಸ್ಪಂದಿಸುತ್ತೇವೆ, ಹೊಂದಾಣಿಕೆ ಮಾಡಿಕೊಳ್ಳುತ್ತೇವೆ, ಪ್ರತಿಕ್ರಿಯಿಸುತ್ತೇವೆ. ಈ ಸಂವಾದಗಳೊಂದಿಗೇ ನಮ್ಮ ಬದುಕನ್ನು ಕೆಲವೊಮ್ಮೆ ವಿಷಮಯ ಮಾಡಿಕೊಳ್ಳುತ್ತೇವೆ. ಮತ್ತೊಮ್ಮೆ ಹಸನು ಮಾಡಿಕೊಳ್ಳುತ್ತೇವೆ. ಅಂತೆಯೇ ಸಮಾಜಕ್ಕೆ ನಮ್ಮ ಬದುಕಿನಿಂದ ಅಮೃತವನ್ನು ಸುರಿದಿದ್ದೇವೆ, ವಿಷವನ್ನೂ ಹಾಕಿದ್ದೇವೆ. ಹಳ್ಳಿಯಲ್ಲಿ ಹುಟ್ಟಿ, ಪಟ್ಟಣದಲ್ಲಿ ಕಲಿತು, ನಗರದಲ್ಲಿ ವಲಸೆ ಹೂಡಿದ್ದೇನೆ. ನಾನು ಓದಿದ್ದು, ಕೇಳಿದ್ದು, ಕಂಡದ್ದು ನನ್ನ ವೈಯಕ್ತಿಕ ಅನುಭವವಾದರೂ ಅದು ಕೊನೆಯ ಪಕ್ಷ ನನ್ನ ತಲೆಮಾರಿನವರಿಗಾದರೂ ಸಾರ್ವತ್ರಿಕವಾದೀತೆಂಬ ನಂಬಿಕೆ ನನ್ನದು. ಆರು ದಶಮಾನಗಳಿಗೂ ಮಿಕ್ಕಿದ ಕಾಲದ ಸ್ಥಿತ್ಯಂತರಗಳಿಗೆ ನಾನೂ ಸಾಕ್ಷಿಯಾಗಿದ್ದೇನೆ. ಈ ಸಾಕ್ಷಿಯ ನೆನಪುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ನೆನಪುಗಳು ನಿಮ್ಮ ನೆನಪುಗಳನ್ನು ತಾಜಾಗೊಳಿಸಿದರೆ ನಾನು ಧನ್ಯ.’

ಡಾ. ಗುರುರಾಜ ಕರಜಗಿ ‘ಸಾಕ್ಷಿ’ ಮಾತು ಭಾಗ 1:

ಡಾ. ಗುರುರಾಜ ಕರಜಗಿ ‘ಸಾಕ್ಷಿ’ ಮಾತು ಭಾಗ 2:

ಡಾ. ಗುರುರಾಜ ಕರಜಗಿ ‘ಸಾಕ್ಷಿ’ ಮಾತು ಭಾಗ 3:

Previous articleಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಮೂರು ತಾಲ್ಲೂಕುಗಳು ಬಂದ್
Next articleಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿ