ಬಳ್ಳಾರಿ: ಭಗ್ನ ಪ್ರೇಮಿಯೊಬ್ಬ ಪ್ರಿಯತೆಮೆ ಸಿಗಲಿಲ್ಲ ಎಂಬುದಾಗಿ ಮನನೊಂದು ಪಟ್ಟಣದ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಹೊಸಪೇಟೆಯ ಪಾಪಿನಾಯಕನಹಳ್ಳಿಯ ನಿವಾಸಿ ನವೀನಕುಮಾರ( 26)ಮೃತ. ಬಾಳೆಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮೃತ ನವೀನ ಹಾಗೂ ಸಂಡೂರಿನ ಕೀರ್ತಿ ಜತೆ ಕಾಲೇಜು ದಿನಗಳಿಂದಲೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪದವಿ ಪೂರ್ಣಗೊಳಿಸಿದ ಕೀರ್ತಿಯು ಉನ್ನತ ವ್ಯಾಸಂಗದ ಕನಸು ಕಂಡಿದ್ದರಿಂದ ಪ್ರೀತಿಗೆ ಬೇಕ್ ಹಾಕುವುದಾಗಿ ನವೀನ್‌ಗೆ ಹೇಳಲಾಗಿತ್ತು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ನವೀನ್ ಶುಕ್ರವಾರ ಪಟ್ಟಣದ ಚರ್ಚ್ ರಸ್ತೆಯಲ್ಲಿರುವ ಕೀರ್ತಿಯ ಮನೆ ಮೇಲೆ ದಾಳಿ ಮಾಡಿ ಕೀರ್ತಿ ಹಾಗೂ ಕುಟುಂಬದವರು ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದ. ಪೊಲೀಸರು ನವೀನ್‌ಗಾಗಿ ಶೋಧ ನಡೆಸುತ್ತಿರುವಾಗಲೇ ಪಟ್ಟಣದ ರೈಲು ಹಳಿಯ ಮೇಲೆ ನವೀನ್ ಶವ ಪತ್ತೆಯಾಗಿದೆ. ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬಸ್ಥರ ಮೇಲೆ : ಪಟ್ಟಣದ ಶಿಕ್ಷಕರ ಕಾಲನಿಯ ಚರ್ಚ್ ರಸ್ತೆಯಲ್ಲಿರುವ ಕೀರ್ತಿಯ ಮನೆಗೆ ನವೀನಕುಮಾರ ನುಗ್ಗಿ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಮನೆ ಬಳಿ ಮಚ್ಚು ಬಿಸಾಡಿದ್ದು, ತಾಲೂಕಿನ ಯಶವಂತನಗರದ ಗಂಡಿಮಲಿಯಮ್ಮ ದೇವಸ್ಥಾನದ ಬಳಿ ಕಾರು ಬಿಟ್ಟು ಶುಕ್ರವಾರ ಪರಾರಿಯಾಗಿದ್ದನು. ಘಟನೆಯಲ್ಲಿ ಕೀರ್ತಿ, ಅವರ ತಾಯಿ ಕಮಲಾಕ್ಷಿ, ಸಹೋದರ ಕಾರ್ತಿಕ್ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ತೋರಣಗಲ್ಲು ಗ್ರಾಮದ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೀರ್ತಿ ಮೇಲೆ ನಡೆದಿರುವ ಹಲ್ಲೆಯ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.