ಪ್ರತ್ಯೇಕಿಸಿ ಓಲೈಸುವುದು ಸಮಾಜ ಕಟ್ಟುವುದಕ್ಕೋ, ಒಡೆಯುವುದಕ್ಕೋ

0
19

ಕಾಮಗಾರಿಯಲ್ಲಿ ಮೀಸಲಾತಿ ಕಲ್ಪಿಸಲು ಹೊರಟಿರುವ ತುಷ್ಟೀಕರಣದ ಧೋರಣೆಯ ನಿರ್ಧಾರ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಅಲ್ಪಸಂಖ್ಯಾತರು ಎಂದರೆ ಮುಸ್ಲಿಂಮರು ಮಾತ್ರ ಕಾಣುತ್ತಾರೆ ಹೊರತೂ ಇತರ ನೈಜ ಅಲ್ಪಸಂಖ್ಯಾತ ಸಮುದಾಯಗಳಾವುವು ಕಾಣುವುದೇ ಇಲ್ಲ, ದಶಕಗಳ ಹಿಂದೆ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಂಮರು ಇಂದು ಸಂಘಟಿತವಾಗಿ ಮುಂಚೂಣಿಯಲ್ಲಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಬಹುಸಂಖ್ಯಾತ ಮತ ಬ್ಯಾಂಕ್ ಆಗಿದ್ದಾರೆ, ಈ ಕಾರಣಕ್ಕಾಗಿ ಮುಸ್ಲಿಂಮರಿಗೆ ಮಾತ್ರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮದ ಹೆಸರಿನಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ ನೀಡಲಾಗಿದೆ,ಇದೀಗ ಸರ್ಕಾರಿ ಕಾಮಗಾರಿಗಳಲ್ಲೂ 4% ಮೀಸಲಾತಿ ಕಲ್ಪಿಸಲು ಮುಂದಾಗಿ ನಿಯಮ ರೂಪಿಸಲು ಹೊರಟಿರುವುದು ಮುಸ್ಲಿಂ ಓಲೈಕೆಯ ಪರಮಾವಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮುಸ್ಲಿಂಮರೂ ಸೇರಿದಂತೆ ಸಮಗ್ರ ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡರೆ ನಾವು ಅದನ್ನು ಆಕ್ಷೇಪಿಸುವುದಿಲ್ಲ. ಆದರೆ ಕೇವಲ ಮುಸ್ಲಿಂಮರನ್ನು ಮಾತ್ರ ಪ್ರತ್ಯೇಕಿಸಿ ಓಲೈಸುವುದು ಸಮಾಜ ಕಟ್ಟುವುದಕ್ಕೋ ಅಥವಾ ಸಮಾಜ ಒಡೆಯುವುದಕ್ಕೋ ಎಂಬ ಪ್ರಶ್ನೆ ಜನರು ಕೇಳುತ್ತಾರೆ.

“ಬಾಯಲ್ಲಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ಮಂತ್ರ, ಸಂಪನ್ಮೂಲದ ಪಾಲಿನಲ್ಲಿ ನಿರಂತರ ಪಕ್ಷಪಾತ”. ಇದು ಕಾಂಗ್ರೆಸ್ ಅನುಸರಿಸಿಕೊಂಡು ಬಂದಿರುವ ಇಬ್ಬದಿ ನೀತಿ, ಸರ್ಕಾರದ ಯೋಜನೆಗಳು ಕಾರ್ಯಗತಗೊಳ್ಳಲು ಪಾರದರ್ಶಕ ನಿಯಮದ ಅಡಿಯಲ್ಲಿ ಕಾಮಗಾರಿಗಳ ನಿರ್ವಹಣೆಯಾಗಬೇಕು, ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಮೀಸಲಾತಿ ನೀಡುವುದು ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿದೆ, ಆದರೆ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವುದು ಪಾರದರ್ಶಕ ನಿಯಮದ ಅರ್ಥವನ್ನೇ ಕಳೆದುಕೊಳ್ಳುತ್ತದೆ.

ಕಸುಬು ಆಧಾರಿತ ಅತಿ ಹಿಂದುಳಿದ ಕಾಯಕ ಸಮುದಾಯಗಳು ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಬದುಕಿನ ಅಸ್ತಿತ್ವ ಕಂಡುಕೊಳ್ಳಲು ಪ್ರಯಾಸಪಡುತ್ತಿದ್ದಾರೆ, ಇಂತಹ ಅತಿ ಹಿಂದುಳಿದ ಸಮುದಾಯಗಳಿಗೆ ಯಾವ ಕಾರ್ಯಕ್ರಮ, ಯೋಜನೆಗಳನ್ನು ಹಾಗೂ ವಿಶೇಷ ಮೀಸಲಾತಿಯನ್ನು ಕಲ್ಪಿಸಿಕೊಡದ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ.

ಧರ್ಮದ ಹೆಸರಿನಲ್ಲಿ ಸಮಾಜ ಹಾಗೂ ನಾಡನ್ನು ವಿಭಜನೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಕರ್ನಾಟಕ ಬಿಜೆಪಿ ಬಲವಾಗಿ ಖಂಡಿಸಿ ವಿರೋಧಿಸುತ್ತದೆ. ಸರ್ಕಾರ ಸದ್ಯ ಕಾಮಗಾರಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಹೊರಟಿರುವ ತುಷ್ಟೀಕರಣದ ಧೋರಣೆಯ ನಿರ್ಧಾರವನ್ನು ಕೈಬಿಡಲು ಒತ್ತಾಯಿಸುವೆ ಎಂದಿದ್ದಾರೆ.

Previous articleಚಿತ್ರರಂಗದ ವಂಶಕ್ಕೂ ಕಲಘಟಗಿ ನಂಟು
Next articleಎಲ್ಲ ಪರೀಕ್ಷೆಗಳೂ ಕನ್ನಡ ಮಾಧ್ಯಮದಲ್ಲೇ ನಡೆಯಲಿ