ಪೈಲಟ್‌ಗಳ ಮುಷ್ಕರ: ೩೮ ವಿಸ್ತಾರ ವಿಮಾನ ರದ್ದು

0
60

ಬೆಂಗಳೂರು: ಪರಿಷ್ಕೃತ ವೇತನ ಸೇರಿದಂತೆ ಇತರ ಬೇಡಿಕೆಗೆ ಪೈಲಟ್‌ಗಳು ನಡೆಸಿದ ಮುಷ್ಕರದಿಂದಾಗಿ ವಿಸ್ತಾರ ಏರ್‌ಲೈನ್ಸ್ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ೫೦ಕ್ಕೂ ಹೆಚ್ಚು ವಿಸ್ತಾರ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಮಂಗಳವಾರ ಬೆಳಗ್ಗೆ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸಂಚರಿಸಬೇಕಿದ್ದ ೩೮ ವಿಮಾನಗಳ ಹಾರಾಟ ರದ್ದುಗೊಂಡಿದೆ. ಮುಂಬೈನಿಂದ ೧೫ ವಿಮಾನಗಳು, ದೆಹಲಿಯಿಂದ ೧೨ ಮತ್ತು ಬೆಂಗಳೂರಿನಿಂದ ೧೧ ವಿಮಾನಗಳ ಹಾರಾಟ ರದ್ದಾಗಿತ್ತು. ನಂತರ ಸುಮಾರು ೧೬೦ ವಿಮಾನಗಳು ವಿಳಂಬವಾಗಿ ಹಾರಾಟ ಆರಂಭಿಸಿದ್ದವು.
ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯಬೇಕಾಗಿ ಬಂದಿರುವುದರಿಂದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿ, ವಿಮಾನಯಾನ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಏರ್ ಇಂಡಿಯಾದೊಂದಿಗೆ ವಿಸ್ತಾರ ಏರ್‌ಲೈನ್ ವಿಲೀನಕ್ಕೆ ಮುಂಚಿತವಾಗಿ ಪರಿಷ್ಕೃತ ವೇತನ ಪ್ರಸ್ತಾವ ಕಳುಹಿಸಿರುವುದನ್ನು ಸಂಸ್ಥೆಯ ಪೈಲಟ್‌ಗಳು ವಿರೋಧಿಸಿದ್ದರು. ಪೈಲಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯದ ಕಾರಣ ನೀಡಿ ಹಠಾತ್ ರಜೆ ಮಾಡಿದ್ದಾರೆ ಎನ್ನಲಾಗಿದೆ. ಪರಿಷ್ಕೃತ ವೇತನ ಪ್ರಸ್ತಾವವನ್ನು ಇ-ಮೇಲ್ ಮೂಲಕ ಪೈಲೆಟ್‌ಗಳಿಗೆ ಕಳುಹಿಸಿ, ಸಹಿ ಮಾಡುವಂತೆ ಸೂಚಿಸಲಾಗಿದೆ. ಸಹಿ ಮಾಡದವರನ್ನು ವಿಲೀನದಿಂದ ಹೊರಗಿಡಲಾಗುವುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ವಿಮಾನ ರದ್ಧತಿ ಮತ್ತು ಸಂಚಾರ ವಿಳಂಬದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ವಿಸ್ತಾರದಿಂದ ವರದಿ ಕೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Previous articleಏ. 8ರಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತದ ಆತಂಕ
Next articleಸುಮಲತಾ ನಡೆ ಜೆಡಿಎಸ್ ಕಡೆ..? ಇಂದು ಅಧಿಕೃತ ನಿಲುವು ಪ್ರಕಟ