ಬೆಳಗಾವಿ: ಗೆಳೆಯನನ್ನು ಪಾರ್ಟಿಗೆ ಕರೆದು ಚೆನ್ನಾಗಿ ಕುಡಿಸಿ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿದ ಪ್ರಕರಣವನ್ನು ಕೇವಲ 24 ಗಂಟೆಯಲ್ಲಿಯೇ ಬೇಧಿಸಿದ ಬೆಳಗಾವಿ ಪೊಲೀಸರು ಆರೋಪಿಯನ್ನು ಕಲಬುರ್ಗಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಬೀಡಿ ಗ್ರಾಮದ ಬಸಪ್ಪ ಹೊಸಟ್ಟಿ ಎಂದು ಗುರುತಿಸಲಾಗಿದೆ. ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು, ಖಾನಾಪುರ ತಾಲೂಕಿನ ಬಲೋಗಾ ಗ್ರಾಮದ ಶಿವನಗೌಡ ಪಾಟೀಲ್(47) ಶವ ನಿನ್ನೆ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಪತ್ತೆಯಾಗಿತ್ತು. ತಲೆಗೆ ಜಜ್ಜಿ ಕೊಲೆ ಮಾಡಿದ್ದು ಮೇಲ್ನೋಟಕ್ಕೆ ತಿಳಿದುಬಂದಿತ್ತು.
ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಖಾನಾಪುರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ವಿಚಾರಿಸಿದಾಗ ಮೃತ ಶಿವನಗೌಡ ಗೆಳೆಯನ ಜತೆ ಪಾರ್ಟಿಗೆ ಹೋಗಿದ್ದ ವಿಚಾರ ಬಯಲಾಯಿತು. ಕೊಲೆ ಮಾಡಿ ಆರೋಪಿ ಕಲಬುರ್ಗಿಗೆ ತೆರಳಿ ತಲೆಮರೆಸಿಕೊಂಡಿದ್ದ. ತಕ್ಷಣ ಆತನನ್ನು ಬೆನ್ನಟ್ಟಿದ ಪೊಲೀಸರು ಕಲಬುರ್ಗಿಯಲ್ಲಿ ಬಂಧಿಸಿದ್ದಾರೆ.
ತಾನೇ ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ಅವರು ತಿಳಿಸಿದರು.