2000 ರೂಪಾಯಿ ನೀಡುವ ಬದಲು ಮೊದಲು ಬಾಣಂತಿಯರ ಸಾವು ನಿಲ್ಲಿಸಿ
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಬಾಣಂತಿಯರ ಪಾಲಿಗೆ ಮರಣ ಮೃದಂಗ ಬಾರಿಸುವಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ಆಸ್ಪತ್ರೆಗಳು ಬಾಣಂತಿಯರ ಪಾಲಿಗೆ ಮರಣ ಮೃದಂಗ ಬಾರಿಸುವಂತಾಗಿದೆ. ಸಿದ್ಧರಾಮಯ್ಯನವರೇ, ನಿಮ್ಮ 2000 ರೂಪಾಯಿ ನೀಡುವ ಬದಲು ಮೊದಲು ಬಾಣಂತಿಯರ ಸಾವು ನಿಲ್ಲಿಸಿ. ಔಷಧ ನಿಯಂತ್ರಣದಲ್ಲಿ ಗೋಲ್ಮಾಲ್ ಆಗುತ್ತಿರುವುದನ್ನು ತಪ್ಪಿಸಿ, ರಾಜ್ಯದಲ್ಲಿ ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಸರ್ಕಾರ ಕೊಡಲಿ ಈವರೆಗೆ 736 ಬಾಣಂತಿಯರ ಸಾವು ಸಂಭವಿಸಿವೆ, ಬಾಣಂತಿಯರ ಡೆತ್ ಆಡಿಟ್ ರಿಪೊರ್ಟ್ ಸಹ ಸರ್ಕಾರ ಮಾಡಿಲ್ಲ. ಕಂಪೆನಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿರುವ ಬಗ್ಗೆಯೂ ಸರ್ಕಾರ ಸ್ಪಷ್ಟತೆ ಕೊಟ್ಟಿಲ್ಲ. ಅಧಿವೇಶನದಲ್ಲಿ ಸರ್ಕಾರ ಭರವಸೆ ಕೊಟ್ಟ ನಂತರವೂ ಬಾಣಂತಿಯರ ಸಾವು ಮುಂದುವರೆದಿದೆ, ಈ ಸರ್ಕಾರ ಬದುಕಿನ ಗ್ಯಾರಂಟಿ ಕೊಡಬೇಕು. ನಿಮ್ಮ ಪಂಚ ಗ್ಯಾರಂಟಿಗಿಂತ ಬದುಕುವ ಗ್ಯಾರಂಟಿ ಬೇಕು. ಆರೋಗ್ಯ ಸಚಿವರು ರಾಜೀನಾಮೆ ಕೊಡಬೇಕು, ಪ್ರಕರಣ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು.