ಬೆಂಗಳೂರು: ನೀತಿ ಆಯೋಗದ ಸಭೆ ಬಹಿಷ್ಕಾರ ಮಾಡಿರುವುದು ಆರೂವರೆ ಕೋಟಿ ಕನ್ನಡಿಗರಿಗೆ ಘೋರ ಅಪಮಾನ ಎಂದು ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಜೂನ್ 27ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನ ಬಹಿಷ್ಕರಿಸಲು ನಿರ್ಧರಿಸುವ ಸಿಎಂ ಸಿದ್ದರಾಮಯ್ಯನವರ ನಡೆ ಅತ್ಯಂತ ಕೀಳು ಮಟ್ಟದ ರಾಜಕೀಯವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ನೀಡಿರುವ ಆರೂವರೆ ಕೋಟಿ ಕನ್ನಡಿಗರಿಗೆ ಘೋರ ಅಪಮಾನ ಎಸಗಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮಂತಹ ಹಿರಿಯ ನಾಯಕರಾದರೂ ‘ಬಾಲಕ ಬುದ್ಧಿ’ ರಾಹುಲ್ ಗಾಂಧಿ ಅವರ ತಾಳಕ್ಕೆ ಕುಣಿಯದೆ ಸ್ವಲ್ಪ ಧೈರ್ಯ, ಮುತ್ಸದ್ಧಿತನ ಪ್ರದರ್ಶನ ಮಾಡುತ್ತೀರಿ ಎಂಬ ನಿರೀಕ್ಷೆ ಇತ್ತು.
ಆದರೆ ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಕನ್ನಡಿಗರ ಹಿತಾಸಕ್ತಿಯನ್ನ ಬಲಿಕೊಡಲು, ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯದಲ್ಲಿ ರಾಜಿ ಮಾಡಿಕೊಳ್ಳಲು ಹೊರಟಿದ್ದೀರಲ್ಲ, ಈ ಚಿಲ್ಲರೆ ರಾಜಕಾರಣ ನಿಮಗೆ ಖಂಡಿತ ಶೋಭೆ ತರುವುದಿಲ್ಲ. ಈ ಅಪಮಾನವನ್ನ ಕನ್ನಡಿಗರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದಿದ್ದಾರೆ.