ನನಗೂ ಭ್ರಷ್ಟಾಚಾರಕ್ಕೂ ಸಾಸಿವೆ ಕಾಳಷ್ಟು ಸಂಬಂಧ ಇಲ್ಲ ಎಂದವರು…

ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸಮಾಜವಾದಕ್ಕೆ ತಿಲಾಂಜಲಿ ನೀಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮೈಸೂರಿನ ಮೂಡಾ ಸೈಟ್ ಮಾರಾಟ ಪ್ರಕರಣದಲ್ಲಿ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ರವಿ ಕುಮಾ‌ರ್ ಒತ್ತಾಯಿಸಿದ್ದಾರೆ.

ಶನಿವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಮಾಜವಾದ ಹಿನ್ನೆಲೆಯಿಂದ ಬಂದವರು ಅಂತ ಹೇಳಿಕೊಳ್ಳುತ್ತಿದ್ದರು. ನನಗೂ ಭ್ರಷ್ಟಾಚಾರಕ್ಕೂ ಸಾಸಿವೆ ಕಾಳಷ್ಟು ಸಂಬಂಧ ಇಲ್ಲ ಎಂದು ಹೇಳುತ್ತಾ ಬಂದಿದ್ದರು. ಆದರೆ ಎರಡನೇ ಬಾರಿಗೆ
ಸಿಎಂ ಆಗಿರುವ ಸಿದ್ದರಾಮಯ್ಯ ಸಮಾಜವಾದಕ್ಕೆ ತಿಲಾಂಜಲಿ ಇರಿಸಿದ್ದಾರೆ. ಮೈಸೂರು ಮೂಡಾದಲ್ಲಿ ತನ್ನ ಪತ್ನಿಗೆ 14 ಸೈಟು ಮಾಡಿಸಿಕೊಟ್ಟಿದ್ದಾರೆ, 35 ಕೋಟಿ ರು. ನೀಡಿ 14 ಸೈಟು ತಗೊಂಡಿದ್ದಾರೆ. ಹಾಗಾದರೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಿಮ್ಮ ಸಮಾಜವಾದ ಆದರ್ಶ ಎಲ್ಲಿ ಹೋಯಿತು ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ರವಿಕುಮಾ‌ರ್, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎಸ್ಸಿ ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹೇಗೆ ಗ್ಯಾರಂಟಿಗೆ ಬಳಸುತ್ತೀರಾ? ಎಸ್‌ಸಿ, ಎಸ್‌ಟಿಗಳಿಗೆ, ದಲಿತರಿಗೆ ಮಹಾ ದ್ರೋಹ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ ಎಂದರು. ಬಹಳ ಬುದ್ದಿವಂತರಾದ ಸಿದ್ದರಾಮಯ್ಯ, ಆರ್ಥಿಕ ತಜ್ಞ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ 4 ರಿಂದ 5 ಲಕ್ಷ ರು. ಬೆಲೆ ಬಾಳುವ ಜಮೀನನ್ನು ಮೂಡಾಕ್ಕೆ ಕೊಟ್ಟು ಈಗ ವಿಪಕ್ಷಗಳಿಂದ ಆರೋಪ ವ್ಯಕ್ತವಾದಾಗ 62 ಕೋಟಿ ರು. ವಾಪಸ್‌ ಕೊಡಿ ಸೈಟ್‌ ಕೊಡುತ್ತೇನೆ ಎನ್ನುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಈ ಹಿಂದೆ ರೈತರು ಕಡಿಮೆ ಬೆಲೆಗೆ ಜಮೀನನ್ನು ಕೊಟ್ಟಿದ್ದಾರೆ. ಈಗ ಅದು ಕೋಟ್ಯಂತರ ಮೌಲ್ಯದ ಫ್ಲಾಟ್ ಸೈಟ್ ಆಗಿ ಪರಿವರ್ತನೆಯಾಗಿದೆ. ಈಗ ಎಲ್ಲ ರೈತರು ಅಷ್ಟೇ ಮೊತ್ತ ಕೇಳಿದರೆ ಕೋಟಿ ರು. ವಾಪಸ್‌ ನೀಡುತ್ತೀರಾ ಎಂದು ರವಿ ಕುಮಾರ್‌ ಪ್ರಶ್ನಿಸಿದರು.

ನೀವು ಭ್ರಷ್ಟ ಮುಖ್ಯಮಂತ್ರಿಯಾಗಿದ್ದೀರಿ., ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದ್ದೀರಿ. 700 ಖಾತೆಗಳಿಗೆ ಹಣ ಸಂದಾಯ ಮಾಡಿ ಡ್ರಾ ಮಾಡಿಸಿದ್ದೀರಿ. ವಾಲ್ಮೀಕಿ ನಿಗಮದ ಹಗರಣದಲ್ಲಿ ನೈತಿಕ ಹೊಣೆಹೊತ್ತು ಸಚಿವ ನಾಗೇಂದ್ರ
ರಾಜಿನಾಮೆ ನೀಡಿದ್ದಾರೆ. ಅದೇ ರೀತಿ ನೀವು ಕೂಡ ಮೂಡಾ ಹಗರಣಕ್ಕೆ ಸಂಬಂಧಿಸಿ ರಾಜಿನಾಮೆ ನೀಡಬೇಕು ಎಂದು ರವಿ ಕುಮಾರ್‌ ಆಗ್ರಹಿಸಿದರು.