ಧಾರವಾಡ: ಜಿಲ್ಲೆಯ ರೈತರಿಗೆ ಯುಗಾದಿಯ ಈ ಸಂದರ್ಭದಲ್ಲಿ ಸಂತೋಷದ ಸುದ್ದಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನನ್ನ ವಿನಂತಿಗೆ ಸ್ಪಂದಿಸಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ( PMKSY) ಅಡಿಯಲ್ಲಿ ನಮ್ಮ ಧಾರವಾಡ ಜಿಲ್ಲೆಯ ಸುಮಾರು 2244 ಹೆಕ್ಟೆರ ಜಮೀನಗಳಿಗೆ 50 ಮೇಲ್ಮೈ ಸಣ್ಣ ನೀರಾವರಿ (SMI) ಯೋಜನೆಗಳಾದ ಚೆಕ್ ಡ್ಯಾಮ,ಬ್ಯಾರೇಜ್ ಮತ್ತು ಬಂದರು ನಿರ್ಮಾಣ ಕಾರ್ಯಗಳಿಗೆ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಅನುಮೋದನೆ ನೀಡಿದ್ದಾರೆ. ಇದರಿಂದ ಸುಮಾರು ಆರು ಸಾವಿರಕ್ಕಿಂತ ಹೆಚ್ಚು ರೈತರು ಲಾಭ ಪಡೆಯಲಿದ್ದಾರೆ.
76 ಕೋಟಿ ರೂಪಾಯಿಯ ಈ ಯೋಜನೆಗಳಿಗೆ ಕೇಂದ್ರ ಸರ್ಕಾರ 45.81 ಕೋಟಿ ಅನುದಾನವನ್ನು ನೀಡಲು ಒಪ್ಪಿಗೆ ನೀಡಿದ್ದು ನಮ್ಮ ರೈತರಿಗೆ ಇದು ವರದಾನವಾಗಲಿದೆ. ನಮ್ಮ ಜಿಲ್ಲೆಯು ಮಳೆ ಆಶ್ರಿತ ಕೃಷಿ ಭೂಮಿಯನ್ನು ಹೆಚ್ಚಾಗಿ ಹೊಂದಿದ್ದು ಮುಂಗಾರು ಮಳೆಯ ನೀರನ್ನು ಶೇಖರಿಸಿ ರೈತರಿಗೆ ವಿಶೇಷವಾಗಿ ಮುಂಗಾರು ಮುಗಿಯುವ ಮತ್ತು ಹಿಂಗಾರು ಆರಂಭದ ಸಂದರ್ಭದಲ್ಲಿ ನೀರಿನ ಸರಬರಾಜು ಮಾಡಲು ಈ ಯೋಜನೆಗಳು ಅನಕೂಲವಾಗಲಿವೆ ಹಾಗೂ ಹಳ್ಳದ ದಂಡಿಯ ಹೊಲಗಳಿಗೆ ಮಳೆ ಇಂದ ಉಂಟಾಗುವ ಹಾನಿ ತಪ್ಪಿಸಲು ಈ ಯೋಜನೆ ಪರಿಣಾಮಕಾರಿಯಾಗಲಿದೆ.
ನನ್ನ ವಿನಂತಿಯ ಮೇರೆಗೆ ಈ ಯೋಜನೆಗಳ ಕುರಿತು ಬಜೆಟ್ ನಂತರ ಪ್ರಥಮ ಪ್ರಾತಿನಿಧ್ಯನೀಡುವದಾಗಿ ಕೇಂದ್ರ ಸಚಿವರು ಆಶ್ವಾಸಗೆ ನೀಡಿದಂತೆ ಈಗ ಈ ಯೋಜನೆಗಳು ಧಾರವಾಡ ರೈತರಿಗೆ ದೊರಿತಿದ್ದು ನಾನು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ ಅವರಿಗೆ ನಮ್ಮ ಜಿಲ್ಲೆಯ ರೈತರ ಪರ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಯೋಜನೆಗಳ ಅನುಮೋದನೆಗಾಗಿ ಸತತವಾಗಿ ಪ್ರಯತ್ನಿಸಿದ ಕುಂದಗೋಳದ ಶಾಸಕ ಎಮ್. ಆರ್. ಪಾಟೀಲ ಅವರ ಪ್ರಯತ್ನ ಅಭಿನಂದನಾರ್ಹ ಎಂದಿದ್ದಾರೆ.