ದೇಶವೇ ತಲೆತಗ್ಗಿಸುವಂತೆ ಮಾಡಿದ ಮಣಿಪುರ

0
15
ಸಂಪಾದಕೀಯ

ಮಣಿಪುರ ಈಗ ಅಗ್ನಿಕುಂಡವಾಗಿದೆ. ಆದಿವಾಸಿ ಮಹಿಳೆಯರ ನಗ್ನಮೆರವಣಿಗೆ, ಅತ್ಯಾಚಾರ ಇಡೀ ದೇಶ ತಗ್ಗಿಸುವಂತೆ ಮಾಡಿದೆ. ಕೂಡಲೇ ರಾಷ್ಟçಪತಿ ಅಳ್ವಿಕೆ ತರುವುದು ಇಂದಿನ ಅಗತ್ಯ.

ಮಣಿಪುರ ಹೊತ್ತಿ ಉರಿಯುತ್ತಿದೆ. ಎರಡು ಸಮುದಾಯಗಳ ನಡುವೆ ದ್ವೇಷ ಇನ್ನೂ ಕೊನೆಗೊಂಡಿಲ್ಲ. ಅದರ ನಡುವೆ ಮೇ ೪ ರಂದು ಇಬ್ಬರು ಆದಿವಾಸಿ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿರುವ ವಿಡಿಯೋ ಈಗ ವೈರಲ್ ಆಗಿರುವುದು ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಎಲ್ಲರೂ ಇದನ್ನು ಅತ್ಯಂತ ಹೀನಕೃತ್ಯ ಎಂದು ಖಂಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸ್ವಯಂ ನಿರ್ದೇಶನ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಇಂಥ ಪರಿಸ್ಥಿತಿ ಎಂದೂ ಬಂದಿರಲಿಲ್ಲ.
ಮಣಿಪುರದಲ್ಲಿ ಬಿಜೆಪಿ ಸರ್ಕಾರ ಇದೆ. ಎರಡು ಸಮುದಾಯಗಳ ನಡುವೆ ಇರುವ ವೈಷಮ್ಯ ಮೀಸಲಾತಿ ಸಮಸ್ಯೆಯಿಂದ ಹಿಂಸಾಕೃತ್ಯಕ್ಕೆ ಕಾರಣವಾಗಿದ್ದು ೧೫೦ಕ್ಕೂ ಹೆಚ್ಚು ಬಲಿಯಾಗಿದ್ದಾರೆ. ಅದರಲ್ಲೂ ಹೆಂಗಸರು ಮತ್ತು ಮಕ್ಕಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಹೊಣೆ ಹೊತ್ತು ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಆದರೆ ಬಿಜೆಪಿ ಪಕ್ಷವೇ ಬೇಡ ಎಂದಿತು. ಎಲ್ಲ ರಾಜಕೀಯ ಪಕ್ಷಗಳೂ ಅಲ್ಲಿಯ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ತರಬೇಕೆಂದು ಹೇಳಿದ್ದರೂ ಕೇಂದ್ರ ಗೃಹ ಖಾತೆ ಮೀನಮೇಷ ಎಣಿಸುತ್ತಿದೆ. ಕಾನೂನು ಪರಿಪಾಲನೆ ರಾಜ್ಯ ಸರ್ಕಾರದ ಕೈಮೀರಿ ಹೋಗಿದೆ ಎಂದರೆ ಆ ಸರ್ಕಾರವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಸಂಸತ್ತು ಇದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿತ್ತು. ಈಗ ಕಾಲ ಮಿಂಚಿಲ್ಲ. ಮೊದಲು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು. ಸೇನೆಗೆ ಎಲ್ಲವನ್ನೂ ಒಪ್ಪಿಸಬೇಕು. ಎರಡೂ ಸಮುದಾಯಗಳ ಸಮಾಜಘಾತಕ ಶಕ್ತಿಗಳನ್ನು ಗಡಿಪಾರು ಮಾಡಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಮೊದಲು ರಕ್ಷಣೆ ಒದಗಿಸಬೇಕು. ಗುಡ್ಡಗಾಡು ಪ್ರದೇಶದಲ್ಲಿ ಶಾಂತಿ ನೆಮ್ಮದಿ ನೆಲಸದೇ ಇದ್ದಲ್ಲಿ ಅಮಾಯಕರು ಬಲಿಯಾಗುತ್ತಾರೆ. ಅವರಿಗೆ ರಕ್ಷಣೆ ಒದಗಿಸುವುದು ಬಹಳ ಕಷ್ಟದ ಕೆಲಸ. ಅಲ್ಲದೆ ಮಣಿಪುರ, ದೇಶದ ಗಡಿ ಭಾಗದಲ್ಲಿರುವುದರಿಂದ ಹೊರ ದೇಶಗಳ ಪ್ರಭಾವ ಇದ್ದೇ ಇರುತ್ತದೆ. ಇದನ್ನು ತಪ್ಪಿಸಬೇಕು ಎಂದರೆ ಕೆಲಕಾಲ ಕೇಂದ್ರಾಡಳಿತ ವಿಧಿಸುವುದು ಅಗತ್ಯ. ಮಣಿಪುರವೂ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳು ಮೊದಲಿನಿಂದಲೂ ಒಂದು ರೀತಿಯ ಅವಜ್ಞೆಗೆ ಒಳಗಾಗಿದೆ. ಅಲ್ಲಿಯ ಆದಿವಾಸಿಗಳು ಈಗಲೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ನಮ್ಮ ದೇಶ ಇತ್ತೀಚೆಗೆ ಚಂದ್ರಯಾನ-೩ ಉಡಾವಣೆಯಿಂದ ಜಗತ್ತಿನಲ್ಲಿ ಹಿರಿಮೆಯನ್ನು ಗಳಿಸಿದ್ದರೆ ಮಣಿಪುರದ ಮಹಿಳೆಯರ ಮೇಲೆ ದೌರ್ಜನ್ಯ ತಲೆ ತಗ್ಗಿಸುವಂತೆ ಮಾಡಿದೆ.
ಇದಕ್ಕೆ ಕಾರಣರಾದವರನ್ನು ಬಂಧಿಸಿ ನೇಣುಶಿಕ್ಷೆ ನ್ಯಾಯಾಲಯ ವಿಧಿಸುವಂತೆ ಮಾಡಬೇಕು. ಆಗ ಮಾತ್ರ ಇತರರಿಗೆ ಅದೊಂದು ಪಾಠವಾಗುತ್ತದೆ. ಇಲ್ಲದಿದ್ದಲ್ಲಿ ಇಂಥ ಶಕ್ತಿಗಳು ಇತರ ರಾಜ್ಯಗಳಲ್ಲೂ ತಲೆ ಎತ್ತಬಹುದು. ಇದಕ್ಕೆ ಅವಕಾಶ ನೀಡಬಾರದು. ಇಡೀ ಮಾನವ ಜನಾಂಗ ತಲೆತಗ್ಗಿಸುವಂಥ ಇಂಥ ಕೃತ್ಯ ಮರುಕಳಿಸದ ಹಾಗೆ ಈಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ.
ದೇಶಕ್ಕೆ ಸ್ವಾತಂತ್ರö್ಯ ಬಂದು ಹಲವು ವರ್ಷಗಳು ಕಳೆದಿವೆ. ಇನ್ನೂ ಈಶಾನ್ಯ ಭಾಗದ ರಾಜ್ಯಗಳ ಜನ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಾಗಿಲ್ಲ. ಈಗ ಈಶಾನ್ಯ ಭಾಗದ ಜನ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಂದು ನೆಲೆಸುವುದಕ್ಕೆ ಆರಂಭಿಸಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಉದ್ಯೋಗ ಅವಕಾಶಗಳನ್ನು ಬೇರೆ ರಾಜ್ಯಗಳಲ್ಲಿ ಕಲ್ಪಿಸಿಕೊಟ್ಟಲ್ಲಿ ಅಲ್ಲಿಯ ಯುವ ಜನಾಂಗ ಮಣಿಪುರದಿಂದ ಹೊರಬಂದು ಉತ್ತಮ ಜೀವನ ನಡೆಸಲು ಸಾಧ್ಯ. ಅಲ್ಲಿ ಈಗಲೂ ಸಮುದಾಯದ ನಾಯಕರ ಪ್ರಾಬಲ್ಯ ಅಧಿಕಗೊಂಡಿದೆ. ಪ್ರಜಾಪ್ರಭುತ್ವ ನೆಪಮಾತ್ರಕ್ಕೆ ಅಲ್ಲಿ ಉಳಿದುಕೊಂಡಿದೆ.

Previous articleಮಹಾ ಮಳೆ: ಪ್ರವಾಹದ ಭೀತಿಯಲ್ಲಿ ಬೆಳಗಾವಿ ಜಿಲ್ಲೆ
Next articleಮಾನವೀಯ ಬದುಕಿಗೆ ಅಧ್ಯಾತ್ಮ ಅವಶ್ಯ