ದೇಶದ ಶ್ರೀಮಂತ ಶಾಸಕರಲ್ಲಿ ಡಿಕೆಶಿಗೆ 2ನೇ ಸ್ಥಾನ

ಬೆಂಗಳೂರು: ದೇಶದ ಶ್ರೀಮಂತ ಶಾಸಕರ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮಸ್ (ಎಡಿಆರ್) ಬಿಡುಗಡೆ ಮಾಡಿದ್ದು, ಟಾಪ್ ೧೦ ಶಾಸಕರ ಪೈಕಿ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ.
೨೮ ರಾಜ್ಯ, ೩ ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು ೪,೦೯೨ ಶಾಸಕರ ಆಸ್ತಿ ಅಧ್ಯಯನದ ಮಾಡಿ ಈ ವರದಿ ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, ೨೨೩ ಶಾಸಕರ ಒಟ್ಟು ಆಸ್ತಿ ೧೪,೧೭೯ ಕೋಟಿ ರೂ.ನಷ್ಟಿದೆ.
ಬಿಡುಗಡೆಯಾಗಿರುವ ವರದಿಯ ಪ್ರಕಾರ, ಮುಂಬೈನ ಘಾಸ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ ೩,೩೮೩ ಕೋಟಿ ರೂ. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ೧,೪೧೩ ಕೋಟಿ ರೂ. ಆಸ್ತಿಯೊಂದಿಗೆ ೨ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡ ೧,೨೬೭ ಕೋಟಿ ಆಸ್ತಿಯೊಂದಿಗೆ ೩ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ೪ನೇ ಸ್ಥಾನದಲ್ಲಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ ಹಾಗೂ ೧೦ನೇ ಸ್ಥಾನದಲ್ಲಿ ಹೆಬ್ಬಾಳ ಕ್ಷೇತ್ರದ ಬೈರತಿ ಸುರೇಶ್ ಕ್ರಮವಾಗಿ ೧,೧೫೬ ಕೋಟಿ ರೂ. ಆಸ್ತಿ ಹಾಗೂ ೬೪೮ ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಕರ್ನಾಟಕದ ಎಲ್ಲಾ ಶಾಸಕರ ಆಸ್ತಿ ಒಟ್ಟು ೧೪,೧೭೯ ಕೋಟಿ ರೂ. ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಅತೀ ಕಡಿಮೆ ಆಸ್ತಿ ಹೊಂದಿರುವ ಶಾಸಕ ಎಂದು ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಶಾಸಕ ನಿರ್ಮಲ್ ಕುಮಾರ್ ಧಾರಾ ಎಂದು ತಿಳಿಸಿದ್ದು, ಇವರ ಆಸ್ತಿ ಕೇವಲ ೧,೭೦೦ ರೂ. ಆಗಿದೆ.
ಅಪರಾಧ ಹಿನ್ನೆಲೆ
೪೦೯೨ ಶಾಸರಲ್ಲಿ ೧೮೬೧ ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ೧೨೦೫ ಶಾಸಕರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ಮೇಲಿನ ಅಪರಾಧಗಳು ಇತ್ಯಾದಿ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ೧೭೪ ಶಾಸಕರಲ್ಲಿ ೧೩೮, ಕೇರಳದ ೧೩೪ ಶಾಸಕರಲ್ಲಿ ೯೩, ತೆಲಂಗಾಣದ ೧೧೯ ಶಾಸಕರಲ್ಲಿ ೮೨, ಬಿಹಾರದ ೨೪೧ ರಲ್ಲಿ ೧೫೮, ಮಹಾರಾಷ್ಟçದ ೨೮೬ ಶಾಸಕರಲ್ಲಿ ೧೮೭ ಮತ್ತು ತಮಿಳುನಾಡಿನ ೨೨೪ ಶಾಸಕರಲ್ಲಿ ೧೩೨ ಶಾಸಕರು ತಮ್ಮ ಸ್ವಯಂ ಪ್ರಮಾಣವಚನ ಸ್ವೀಕರಿಸಿದ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

ಬಜೆಟ್‌ಗಿಂತ ಶಾಸಕರ ಆಸ್ತಿ ಹೆಚ್ಚು
೪೦೯೨ ಹಾಲಿ ಶಾಸಕರ ಒಟ್ಟು ಆಸ್ತಿ ೭೩,೩೪೮ ಕೋಟಿ ರೂ. ಆಗಿದೆ. ಇದು ನಾಗಾಲ್ಯಾಂಡ್‌ನ ೨೩,೦೮೬ ಕೋಟಿ ರೂ., ತ್ರಿಪುರ ರಾಜ್ಯದ ೨೬,೮೯೨ ಕೋಟಿ ರೂ. ಮತ್ತು ಮೇಘಾಲಯದ ೨೨,೦೨೨ ಕೋಟಿ ರೂ.ಗಳ ವಾರ್ಷಿಕ ಬಜೆಟ್ (೨೦೨೩-೨೪)ಗಿಂತ ಹೆಚ್ಚು ಎಂದು ತಿಳಿಸಿದೆ.

ಪಕ್ಷವಾರು ಸರಾಸರಿ ಆಸ್ತಿಗಳು
ಪ್ರಮುಖ ಪಕ್ಷಗಳಲ್ಲಿ, ವಿಶ್ಲೇಷಿಸಲಾದ ೧೬೫೩ ಬಿಜೆಪಿ ಶಾಸಕರಿಗೆ ಪ್ರತಿ ಶಾಸಕರ ಸರಾಸರಿ ಆಸ್ತಿ ೧೫.೮೯ ಕೋಟಿ ರೂ., ಭಾರತೀಯ ಕಾಂಗ್ರೆಸ್ ಶಾಸಕರ ಆಸ್ತಿ ಮೌಲ್ಯ ೨೬.೮೬ ಕೋಟಿ ರೂ.ಗಳಾಗಿದ್ದು, ಟಿಡಿಪಿ ಶಾಸಕರ ಆಸ್ತಿ ಮೌಲ್ಯ ೬೭.೯೭ ಕೋಟಿ ರೂ.ಗಳಾಗಿದೆ ಎಂದು ವಿಶ್ಲೇಷಿಸಲಾಗಿದೆ. ಶಿವಸೇನೆಯ ೫೯ ಶಾಸಕರ ಒಟ್ಟು ಆಸ್ತಿ ೨೯.೮೧ ಕೋಟಿ ರೂ.ಗಳೆಂದು ವಿಶ್ಲೇಷಿಸಲಾಗಿದೆ. ೧೨೩ ಎಎಪಿ ಶಾಸಕರ ಸರಾಸರಿ ಆಸ್ತಿ ಮೌಲ್ಯ ೭.೩೩ ಕೋಟಿ ರೂ.ಗಳಾಗಿವೆ ಎಂದು ತಿಳಿಸಿದೆ.